ಸರಗೂರು, ನವೆಂಬರ್ 7, 2025 : ಸರಗೂರು ತಾಲೂಕಿನ ಕುರ್ಣೇಗಾಲ ಅಥವಾ ಅದರ ಸುತ್ತಮುತ್ತಲ ಕಾಡಂಚಿನ ಗ್ರಾಮಗಳಲ್ಲಿ ಹುಲಿ ಆಕ್ರಮಣದ ಆತಂಕ ಮುಂದುವರಿದಿದ್ದು, ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿಯಾಗಿರುವ ಘಟನೆ ವರದಿಯಾಗಿದೆ.

ದಂಡನಾಯ್ಕ ಅಲಿಯಾಸ್ ಸ್ವಾಮಿ (58) ಮೃತ ರೈತ. ಜಾನುವಾರುಗಳನ್ನು ಮೇಯಿಸಲು ತಮ್ಮ ಜಮೀನಿಗೆ ತೆರಳಿದ್ದ ರೈತನ ಮೇಲೆ ಕಾಡಿನಿಂದ ಹೊರಬಂದಿರುವ ವ್ಯಾಘ್ರ ದಾಳಿ ನಡೆಸಿದೆ ಎನ್ನಲಾಗಿದೆ. ಹುಲಿಯ ಭೀಕರ ದಾಳಿಯಿಂದಾಗಿ ರೈತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ನುಗು ವನ್ಯಜೀವಿಧಾಮ ವ್ಯಾಪ್ತಿಯ ಅರಣ್ಯದಲ್ಲಿ ಘಟನೆ ಜರುಗಿದೆ. ಜಮೀನಿನಲ್ಲಿ ಕೊಂದು ಅರ್ಧ ಕಿಲೋಮೀಟರ್ ದೂರ ಎಳೆದುಕೊಂಡು ಹೋಗಿರುವ ಹುಲಿ, ರೈತನ ತೊಡೆ, ತಲೆ ಭಾಗ ತಿಂದಿರುವುದಾಗಿ ವರದಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ ಒಂದು ತಿಂಗಳ ಅಂತರದಲ್ಲಿ ನಾಲ್ಕನೇ ಬಾರಿ ಹುಲಿ ದಾಳಿ ನಡೆಸಿರುವ ಪ್ರಕರಣ ಇದಾಗಿದ್ದು, ಹೆಚ್ ಡಿ ಕೋಟೆ ಹಾಗೂ ಸರಗೂರು ತಾಲೂಕುಗಳಲ್ಲಿ ನಡೆದಿರುವ ಹುಲಿ ದಾಳಿಗಳಲ್ಲಿ ರೈತ ದಂಡನಾಯ್ಕ ಮೂರನೇ ಬಲಿಯಾಗಿದ್ದರೆ, ಆಸ್ಪತ್ರೆಗೆ ದಾಖಲಾಗಿ ಸಾವು ಬದುಕಿನ ನಡುವೆ ಮತ್ತೋರ್ವ ರೈತ ಹೋರಾಟ ನಡೆಸುತ್ತಿದ್ದಾರೆ.
