ಸರಗೂರು,ನವೆಂಬರ್ 20, 2025 : ಸರಗೂರು ತಾಲೂಕಿನ ಹಳೆ ಹೆಗ್ಗೂಡಿಲು ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ನುಗು ವನ್ಯಜೀವಿ ಅರಣ್ಯ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ, ಈ ಹಿಂದೆ ವ್ಯಕ್ತಿಯೊಬ್ಬರನ್ನು ಬಲಿ ಪಡೆದಿದ್ದ ಜಾಗದ ಸುತ್ತಮುತ್ತಲ ಬೆಟ್ಟದ ಮೇಲೆ ಎರಡು ಹುಲಿಗಳು ಪ್ರತ್ಯಕ್ಷವಾಗಿವೆ.
ಸ್ಥಳೀಯರ ಮೊಬೈಲ್‌ನಲ್ಲಿ ದೃಶ್ಯ ಸೆರೆ: ಬೆಟ್ಟದ ಮೇಲೆ ಕಾಣಿಸಿಕೊಂಡಿರುವ ಹುಲಿಗಳ ದೃಶ್ಯಾವಳಿಯನ್ನು ಸ್ಥಳೀಯರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋಗಳು ಸುತ್ತಮುತ್ತಲ ಪ್ರದೇಶದಲ್ಲಿ ಹರಿದಾಡುತ್ತಿವೆ. ಹಳೆಯ ಘಟನೆ ಮರುಕಳಿಕೆ ಭೀತಿ: ಈ ಹಿಂದೆ, ಇದೇ ಹಳೆ ಹೆಗ್ಗೂಡಿಲು ಗ್ರಾಮದಲ್ಲಿ ದಂಡನಾಯಕ ಎಂಬುವವರು ಹುಲಿ ದಾಳಿಗೆ ಬಲಿಯಾಗಿದ್ದರು. ಇದೀಗ ಅದೇ ಪ್ರದೇಶದಲ್ಲಿ ಮತ್ತೆ ಹುಲಿಗಳು ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಭೀತಿಯನ್ನು ಹೆಚ್ಚಿಸಿದೆ.
ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ಆರಂಭ!
ಜನರ ಸುರಕ್ಷತೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಉದ್ದೇಶದಿಂದ ಅರಣ್ಯ ಇಲಾಖೆಯು ತಕ್ಷಣವೇ ಕಾರ್ಯಾಚರಣೆ ಆರಂಭಿಸಿದೆ. ಹಳೆ ಹೆಗ್ಗೂಡಿಲು ವ್ಯಾಪ್ತಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಂಡಿದೆ. ಹುಲಿಗಳ ಸೆರೆಗಾಗಿ ಮತ್ತು ಅವುಗಳನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಮರಳಿಸಲು ನೆರವಾಗಲು ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಹುಲಿಗಳ ಚಲನವಲನದ ಮೇಲೆ ನಿಗಾ ಇರಿಸಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
