ತನ್ನ ಪ್ರಯಾಣಿಕರಿಗೆ ತುರ್ತು ಸಂದರ್ಭಗಳಲ್ಲಿ ಸವಲತ್ತುಗಳನ್ನು ನೀಡಲು ವಿಫಲವಾದ ಏರ್ ಇಂಡಿಯಾ ಸಂಸ್ಥೆಗೆ ನಾಗರಿಕ ವಿಮಾನಯಾನ ನಿಯಂತ್ರಣ ಪ್ರಾಧಿಕಾರ 10 ಲಕ್ಷ ರು. ದಂಡ ವಿಧಿಸಿದೆ. ನ.3ರಂದು ಪ್ರಾಧಿಕಾರವು (DGCA) ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಿತ್ತು. ಅದರ ಸ್ಪಂದನೆಯಲ್ಲಿ ತನ್ನ ನಿಯಮಕ್ಕೆ ತಕ್ಕಂತೆ ನಾಗರಿಕ ವಿಮಾನಯಾನ ಅವಶ್ಯಕತೆ ಪೂರೈಸದ ವಿವರಣೆ ನೀಡಿದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆಗೆ ದಂಡ ವಿಧಿಸಿ ಆದೇಶಿಸಿದೆ.
ಏರ್ ಇಂಡಿಯಾ ಸಂಸ್ಥೆಯ ಸೇವೆಗಳನ್ನು ದೆಹಲಿ, ಕೊಚ್ಚಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಪರಿಶೀಲನೆ ನಡೆಸಿದ ನಿಯಂತ್ರಣಾ ಪ್ರಾಧಿಕಾರ, ತನ್ನ ಪ್ರಯಾಣಿಕರಿಗೆ ವಿಳಂಬದ ಸಮಯದಲ್ಲಿ ಹೋಟೆಲ್ ವಾಸ್ತವ್ಯ ಒದಗಿಸಿರುವುದಿಲ್ಲ, ತಮ್ಮ ಕೆಲವು ಸಿಬ್ಬಂದಿಗೆ ತರಬೇತಿ ನೀಡಿರುವುದಿಲ್ಲ ಮತ್ತು ಬಿಜಿ಼ನೆಸ್ ಕ್ಲಾಸ್ ಪ್ರಯಾಣಿಕರಿಗೆ ಕಾರಣಾಂತರಗಳಿಂದ ಎಕಾನಮಿ ಕ್ಲಾಸ್ ಸೀಟುಗಳನ್ನು ನೀಡಿದ ಸಂದರ್ಭದಲ್ಲಿ ಸೂಕ್ತ ಪರಿಹಾರವನ್ನು ನೀಡಿಲ್ಲ ಎಂಬ ಅಂಶಗಳನ್ನು ಪರಿಗಣಿಸಿ ನೋಟಿಸ್ ನೀಡಿತ್ತು.