ಮೈಸೂರು , ಜನವರಿ 1, 2026 :ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ (MAX) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ನಟ ಸುದೀಪ್ ಇಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿದರು.

ನಟ ಸುದೀಪ್ ಮೈಸೂರಿನ ಪ್ರಸಿದ್ಧ ಸಂಗಮ್ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ನೆಚ್ಚಿನ ನಟನನ್ನು ನೋಡಲು ಜನಸಾಗರವೇ ಹರಿದುಬಂದಿದ್ದು, ಜನಜಂಗುಳಿಯನ್ನು ನಿಯಂತ್ರಿಸಲು ಥಿಯೇಟರ್ ಮುಂಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಣೆ
ಥಿಯೇಟರ್‌ಗೆ ಭೇಟಿ ನೀಡಿದ ಸುದೀಪ್ ಅವರು ಕೇವಲ ಅಭಿಮಾನಿಗಳನ್ನು ಭೇಟಿಯಾಗುವುದು ಮಾತ್ರವಲ್ಲದೆ, ಕೆಲ ಸಮಯ ಅಭಿಮಾನಿಗಳ ಜೊತೆ ಕುಳಿತು ಚಿತ್ರ ವೀಕ್ಷಿಸಿ ಸಂಭ್ರಮಿಸಿದರು. ಇದು ಅಲ್ಲಿ ನೆರೆದಿದ್ದ ಫ್ಯಾನ್ಸ್‌ಗೆ ಅತೀವ ಸಂತಸ ತಂದಿತು.

ಚಿತ್ರದ ಯಶಸ್ಸಿನ ಕುರಿತು ಮಾತನಾಡಿದ ಕಿಚ್ಚ ಸುದೀಪ್ ,ಚಿತ್ರ ತುಂಬಾ ಚೆನ್ನಾಗಿ ಪ್ರದರ್ಶನವಾಗುತ್ತಿದೆ. ಈ ಯಶಸ್ಸಿಗೆ ಅಭಿಮಾನಿಗಳ ಪ್ರೀತಿಯೇ ಕಾರಣ. ಅಭಿಮಾನಿಗಳ ಈ ಅಭಿಮಾನಕ್ಕೆ ಏನೇ ಹೇಳಿದರು ಕಡಿಮೆ. ಪೈರಸಿ ವಿರುದ್ಧ ನಾವು ನಡೆಸಿದ ಹೋರಾಟಕ್ಕೆ ಯಶಸ್ಸು ಸಿಕ್ಕಿರುವುದು ಖುಷಿಯ ವಿಚಾರ. ಈ ಚಿತ್ರವನ್ನು ಪೈರಸಿಯಿಂದ ರಕ್ಷಿಸಿರುವುದು ನನ್ನ ಫ್ಯಾನ್ಸ್. ಮೈಸೂರಿನಲ್ಲಿ ನಾನು ಕೊನೆಯದಾಗಿ ಸಿನಿಮಾ ನೋಡಿದ್ದು ಯಾವಾಗ ಅಂತ ಈಗ ಮರೆತು ಹೋಗಿದೆ. ಇಂದು ಇಲ್ಲಿ ಕುಳಿತು ಸಿನಿಮಾ ನೋಡಿದ್ದು ತುಂಬಾ ನೆನಪಾಗಿ ಉಳಿಯುತ್ತದೆ.ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, ಮುಂಬರುವ ದಿನಗಳಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನುಡಿದರು.
ಒಟ್ಟಿನಲ್ಲಿ ‘ಮ್ಯಾಕ್ಸ್’ ಸಿನಿಮಾದ ಗೆಲುವಿನ ಸಂಭ್ರಮ ಮೈಸೂರಿನಲ್ಲಿ ಹಬ್ಬದ ವಾತಾವರಣ ನಿರ್ಮಿಸಿತ್ತು.
