ಬೆಂಗಳೂರು, ಜನವರಿ 31,2026 : ನಾನು ತಿನ್ನುವ ಊಟದ ಕುರಿತು ನನ್ನನ್ನೇ ಕೇಳಿ.. ನನ್ನ ಧರ್ಮವನ್ನಲ್ಲ.. ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನ ಬೇಡ ಎಂದು ಖ್ಯಾತ ನಟ ಡಾಲಿ ಧನಂಜಯ್ ಹೇಳಿದ್ದಾರೆ.
ಈ ಹಿಂದೆ ನಟ ಧನಂಜಯ್ ಹೋಟೆಲ್ ಉದ್ಘಾಟಿಸಿ ಅಲ್ಲಿ ಬಿರಿಯಾನಿ ತಿನ್ನುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿತ್ತು. ಡಾಲಿ ಧನಂಜಯ್ ಬಿರಿಯಾನಿ ತಿನ್ನುತ್ತಿರುವುದನ್ನು ಪ್ರಶ್ನಿಸಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪರೋಕ್ಷ ಕಿಡಿಕಾರಿದ್ದರು. ಇದು ವ್ಯಾಪಕ ಸುದ್ದಿಗೂ ಗ್ರಾಸವಾಗಿತ್ತು.
ಲಿಂಗಾಯತ ಆಗಿ ಧನಂಜಯ್ ಅವರು ಮಾಂಸ ತಿಂದಿದ್ದು ಚರ್ಚೆಗೆ ಕಾರಣ ಆಯಿತು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದೀಗ ಈ ಎಲ್ಲ ಟೀಕೆಗಳಿಗೆ ಸ್ವತಃ ನಟ ಡಾಲಿ ಧನಂಜಯ್ ಖಡಕ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಾಲಿ, ‘ಸ್ನೇಹಿತನ ಹೋಟೆಲ್‌ಗೆ ಊಟಕ್ಕೆ ಹೋಗಿದ್ದನ್ನು ಜಾತಿ, ಸಮುದಾಯದೊಂದಿಗೆ ತಳುಕು ಹಾಕಿರುವುದು ಬೇಸರ ತಂದಿದೆ. ಚಿತ್ರರಂಗಕ್ಕಾಗಿ ಮಾಡುತ್ತಿರುವ ಕೆಲಸದ ಬಗ್ಗೆ ಚರ್ಚೆಯಾಗಬೇಕು. ನಮ್ಮ ವೈಯಕ್ತಿಕ ವಿಚಾರವಲ್ಲ. ಆಹಾರ ಎನ್ನೋದು ಅವರವರ ಆಯ್ಕೆ. ನನ್ನ ಬಳಿ ಬಂದು ಏನು ತಿಂತೀರಿ ಎಂದು ಕೇಳಿದರೆ ನಾನು ಖುಷಿಯಿಂದ ಅದನ್ನು ವಿವರಿಸುತ್ತೇನೆ. ಧನಂಜಯ್ ನಾನ್ವೆಜ್ ತಿಂತಾರಾ ಎಂದು ಕೇಳೋದು ತಪ್ಪಲ್ಲ. ಆದರೆ, ಲಿಂಗಾಯುತರು, ಬ್ರಾಹ್ಮಣರೆಲ್ಲ ಮಾಂಸ ತಿಂತಾರಾ ಎಂದು ಕೇಳೋದು ತಪ್ಪು’ ಎಂದು ಡಾಲಿ ಕಿಡಿಕಾರಿದ್ದಾರೆ.
