ಟಿ. ನರಸೀಪುರ, ಫೆಬ್ರವರಿ 5, 2026 : ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ವಕೀಲರ ಸಂಘದ ಅಧ್ಯಕ್ಷರ ಮೇಲೆ ಭೀಕರ ಹಲ್ಲೆ ನಡೆದಿದೆ. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ತೊಟ್ಟವಾಡಿ ಮಹದೇವಸ್ವಾಮಿ ಅವರು ಹಲ್ಲೆಗೊಳಗಾದವರು.
ನಂಜನಗೂಡು ಮುಖ್ಯ ರಸ್ತೆಯ ಎಪಿಎಂಸಿ ವಾಣಿಜ್ಯ ಮಳಿಗೆಗಳ ಮುಂಭಾಗ, ಅಂದರೆ ಕೋರ್ಟ್‌ನ ಸಮೀಪದಲ್ಲೇ ಈ ಘಟನೆ ನಡೆದಿದ್ದು, ಅವರ ಸಂಬಂಧಿ ಸಂತೋಷ್ ಎಂಬಾತ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದ ಆರೋಪಿ ಸಂತೋಷ್‌ನನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದಿದ್ದಾರೆ.
ಗಾಯಗೊಂಡಿರುವ ವಕೀಲ ಮಹದೇವಸ್ವಾಮಿ ಅವರನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಸಂತೋಷ್ ಕಳೆದ ಕೆಲವು ದಿನಗಳಿಂದ ಮಹದೇವಸ್ವಾಮಿ ಅವರಿಗೆ ಪದೇಪದೇ ಕೊಲೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದ್ದು, ಇಂದು ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ.
ಈ ಘಟನೆಯಿಂದ ವಕೀಲರ ಸಂಘವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ನ್ಯಾಯವಾದಿಗಳ ಮೇಲೆಯೇ ಈ ರೀತಿ ಹಲ್ಲೆಯಾಗುತ್ತಿದ್ದರೆ ಸಾಮಾನ್ಯ ಜನರ ಸುರಕ್ಷತೆಯ ಗತಿ ಏನು?” ಎಂದು ಪ್ರಶ್ನಿಸಿರುವ ವಕೀಲರು, ಸರ್ಕಾರವು ತಕ್ಷಣವೇ ಸೂಕ್ತ ರಕ್ಷಣೆ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
