ನಂಜನಗೂಡು: ಬೇಸಿಗೆಗೂ ಮುನ್ನವೇ ನಂಜನಗೂಡು ತಾಲ್ಲೂಕಿನ ಕೋಣನೂರು ಮತ್ತು ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ನೂರಾರು ಎಕರೆ ಪ್ರದೇಶ ಭಸ್ಮವಾಗಿದೆ. ಕೋಣನೂರು ಗ್ರಾಮದ ಹೊರವಲಯದಲ್ಲಿರುವ ಎತ್ತಿನ ಮುಂಟಿ ಪ್ರದೇಶದಲ್ಲಿ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿ, ಸುಳಿಗಾಳಿಗೆ ಸಿಲುಕಿ ಮೇವಿನ ಪ್ರದೇಶಕ್ಕೆ ವ್ಯಾಪಿಸಿ ಸುಟ್ಟು ಕರಕಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ರೈತರು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಲು ಹರ ಸಾಹಸ ಪಡುತ್ತಿದ್ದಾರೆ. ದನಕರುಗಳು ಮತ್ತು ಕಾಡು ಪ್ರಾಣಿಗಳ ಆಹಾರವಾಗಿದ್ದ ಪ್ರದೇಶ ಈಗ ನಾಶವಾಗಿದೆ. ಜಾನುವಾರುಗಳಿಗೆ ಮೇವಿಗೆ ಕೊರತೆಯಾಗುವ ಸಾಧ್ಯತೆಯಿದ್ದು, ಬೇಸಿಗೆ ಇರುವ ಕಾರಣ ಆದಷ್ಟು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ನೇಮಕ ಮಾಡಿ ಬೆಂಕಿ ಬೀಳದಂತೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.