ನಂಜನಗೂಡು, ಜನವರಿ 21, 2026: ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೆಬ್ಯಾ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ರಾಜು ಎಂಬುವವರಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಅಮಿತಾಬ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಈ ಗಲಾಟೆ ನಡೆದಿದ್ದು, “ನಾವು ಹೇಳಿದವರಿಗೆ ಜಾಗ ಕೊಡಬೇಕು” ಎಂದು ರಾಜು ಹಾಗೂ ಅವರ ಆಪ್ತರು ಧಮ್ಕಿ ಹಾಕುತ್ತಿದ್ದಾರೆ ಎಂದು ಸಂತ್ರಸ್ತ ಕುಟುಂಬದವರು ದೂರಿದ್ದಾರೆ.

“ನಮಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರು ಗೊತ್ತು” ಎಂದು ರಾಜಕೀಯ ಪ್ರಭಾವದ ಮಾತುಗಳನ್ನಾಡಿ ಬೆದರಿಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದ್ದರೂ ಸಹ, ಆರೋಪಿಗಳು ಹಾಗೂ ಅವರ ಬೆಂಬಲಿಗರ ಕಿರುಕುಳ ನಿಂತಿಲ್ಲ. ರಾಜು ಮತ್ತು ಅವರ ತಂಡದವರು ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದಲ್ಲದೆ, ರಾತ್ರಿ ವೇಳೆ ಮನೆಗೆ ಕಲ್ಲು ಎಸೆದು ಭಯಭೀತಗೊಳಿಸುತ್ತಿದ್ದಾರೆ ಎಂದು ಅಮಿತಾಬ್ ಅಳಲು ತೋಡಿಕೊಂಡಿದ್ದಾರೆ.
ಈ ಅಕ್ರಮಗಳ ಕುರಿತು ತಹಸೀಲ್ದಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ (SP) ಗಮನಕ್ಕೆ ತಂದಿದ್ದರೂ ಸಹ ತಮಗೆ ನ್ಯಾಯ ಸಿಗುತ್ತಿಲ್ಲ ಮತ್ತು ಕಿರುಕುಳ ತಪ್ಪುತ್ತಿಲ್ಲ ಎಂದು ನೊಂದ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
