ಮೈಸೂರು, ಫೆಬ್ರವರಿ 5, 2026: ಸಾಂಸ್ಕೃತಿಕ ನಗರಿಯ ಹೆಮ್ಮೆಯ ಪಾರಂಪರಿಕ ಕಟ್ಟಡವಾಗಿರುವ ಹಳೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಿಗ್ ಬಾಸ್ ಖ್ಯಾತಿಯ ರಜತ್ ಅವರು ಸಿಗರೇಟ್ ಸೇದುತ್ತಾ ಫೋಟೋಶೂಟ್ ನಡೆಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ವರ್ತನೆಯನ್ನು ಖಂಡಿಸಿ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ರಜತ್ ವಿರುದ್ಧ ದೂರು ದಾಖಲಿಸಲಾಗಿದೆ.

ಕರ್ನಾಟಕ ಸೇನಾಪಡೆ ಸಂಘಟನೆಯು ಈ ಬಗ್ಗೆ ಅಧಿಕೃತವಾಗಿ ದೂರು ನೀಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಹಾಗೂ ಪಾರಂಪರಿಕ ಮಹತ್ವವಿರುವ ಜಾಗದಲ್ಲಿ ಧೂಮಪಾನ ಮಾಡುವ ಮೂಲಕ ರಜತ್ ಸಮಾಜಕ್ಕೆ ಅತ್ಯಂತ ಕೆಟ್ಟ ಸಂದೇಶ ರವಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಯುವಜನತೆಗೆ ಮಾದರಿಯಾಗಬೇಕಾದವರು ಈ ರೀತಿ ಬೇಜವಾಬ್ದಾರಿಯಿಂದ ನಡೆದುಕೊಂಡಿರುವುದು ಸರಿಯಲ್ಲ ಎಂದು ಸಂಘಟನೆ ಕಿಡಿಕಾರಿದೆ.
ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಸೇನಾಪಡೆ ಸಂಘಟನೆಯ ರಾಜ್ಯಾಧ್ಯಕ್ಷ ತೇಜಸ್ ಲೋಕೇಶ್ ಗೌಡ ಅವರು, “ಪಾರಂಪರಿಕ ಕಟ್ಟಡದ ಗೌರವಕ್ಕೆ ಧಕ್ಕೆ ತಂದಿರುವ ಮತ್ತು ಸಾರ್ವಜನಿಕವಾಗಿ ನಿಯಮ ಉಲ್ಲಂಘಿಸಿರುವ ರಜತ್ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ಪ್ರಚಾರದ ಹಪಾಹಪಿಗೆ ಬಿದ್ದು ಇಂತಹ ಕೃತ್ಯಗಳನ್ನು ಎಸಗುವವರ ವಿರುದ್ಧ ಪೊಲೀಸರು ತಕ್ಕ ಪಾಠ ಕಲಿಸಬೇಕು ಎಂಬುದು ಸಂಘಟನೆಯ ಒತ್ತಾಯವಾಗಿದೆ.
