ಬೆಂಗಳೂರು, ಫೆಬ್ರವರಿ 2, 2026 : ಸಿಲಿಕಾನ್ ಸಿಟಿಯಲ್ಲಿ ಜಲಮಂಡಳಿಯ (BWSSB) ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಅಮಾಯಕ ಜೀವ ಬಲಿಯಾಗಿದೆ. ತಾಳಗುಣಿ ಸಮೀಪದ ಕನಕಪುರ ರಸ್ತೆಯ ಪೈಪ್‌ಲೈನ್ ರಸ್ತೆಯಲ್ಲಿ ನಡೆಯುತ್ತಿದ್ದ ಕಾಮಗಾರಿ ವೇಳೆ, ಮುಚ್ಚಳವಿಲ್ಲದೆ ತೆರೆದಿದ್ದ ಸಂಪಿಗೆ ಬಿದ್ದು 14 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತನನ್ನು ತಾಳಗುಣಿ ನಿವಾಸಿ ರಮೇಶ್ ಎಂಬುವವರ ಪುತ್ರ ಪ್ರೀತಂ (14) ಎಂದು ಗುರುತಿಸಲಾಗಿದೆ. ಈತ ಕಳೆದ ಜನವರಿ 28ರಂದು ಮನೆಯಿಂದ ಹೊರಗೆ ಹೋದವನು ನಾಪತ್ತೆಯಾಗಿದ್ದನು. ಕುಟುಂಬಸ್ಥರು ಮೂರು ದಿನಗಳ ಕಾಲ ಸತತವಾಗಿ ಹುಡುಕಾಟ ನಡೆಸಿದ್ದರು. ಈ ಕುರಿತು ಜನವರಿ 29ರಂದು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವೂ ದಾಖಲಾಗಿತ್ತು.
ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಅಳವಡಿಸಲಾಗಿದ್ದ ತೆರೆದ ಸಂಪಿನಿಂದ ಶನಿವಾರ ತೀವ್ರವಾದ ಕೊಳೆತ ವಾಸನೆ ಬರುತ್ತಿತ್ತು. ಇದರಿಂದ ಅನುಮಾನಗೊಂಡ ಸ್ಥಳೀಯರು ಪರಿಶೀಲಿಸಿದಾಗ ಪ್ರೀತಂನ ಮೃತದೇಹ ಪತ್ತೆಯಾಗಿದೆ. ಸಂಪಿಗೆ ಮುಚ್ಚಳ ಹಾಕದ ಕಾರಣ ಬಾಲಕ ಆಯತಪ್ಪಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಕುಟುಂಬಸ್ಥರ ಆಕ್ರೋಶ:
“ಜಲಮಂಡಳಿ ಅಧಿಕಾರಿಗಳ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವೇ ಈ ಸಾವಿಗೆ ನೇರ ಕಾರಣ” ಎಂದು ಮೃತನ ಪೋಷಕರು ಮತ್ತು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನವಸತಿ ಇರುವ ಪ್ರದೇಶದಲ್ಲಿ ಕಾಮಗಾರಿ ನಡೆಸುವಾಗ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಇಲಾಖೆಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದ್ದು, ಕಗ್ಗಲಿಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.
