ಮೈಸೂರು, ಏಪ್ರಿಲ್ 17, 2026: ಸಾಂಸ್ಕೃತಿಕ ನಗರಿಯ ಸಿದ್ದಾರ್ಥನಗರದಲ್ಲಿ ಅಕ್ಷರಶಃ ಎದೆನಡುಗಿಸುವ ಘಟನೆಯೊಂದು ನಡೆದಿದ್ದು, ಮನೆಯೊಳಗೆ ನುಗ್ಗಿ ಮಂಚದ ಕೆಳಗೆ ಆರಾಮವಾಗಿ ನಿದ್ದೆಗೆ ಜಾರಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.
ನಗರದ ನಿವಾಸಿ ಸುರೇಶ್ ಎಂಬುವವರ ಮನೆಗೆ ಬೆಳಿಗ್ಗೆ ಸುಮಾರು 7:30ರ ವೇಳೆಗೆ ಚಿರತೆ ನುಗ್ಗಿರಬಹುದು ಎಂದು ಶಂಕಿಸಲಾಗಿದೆ. ಆ ಸಮಯದಲ್ಲಿ ಮನೆಯ ಮುಖ್ಯ ದ್ವಾರ ಕೇವಲ ಹತ್ತು ನಿಮಿಷಗಳ ಕಾಲ ತೆರೆದಿದ್ದಾಗ ಯಾರಿಗೂ ತಿಳಿಯದಂತೆ ಒಳಬಂದ ಚಿರತೆ, ಬೆಡ್‌ರೂಂನ ಮಂಚದ ಕೆಳಗೆ ಸೇರಿಕೊಂಡಿತ್ತು. ವಿಶೇಷವೆಂದರೆ, ಅದೇ ಮಂಚದ ಮೇಲೆ ಸುರೇಶ್ ಅವರ ವಯಸ್ಸಾದ ತಾಯಿ ಶೈಲಜಾ ಮಲಗಿದ್ದರು. ಸುಮಾರು ಎರಡು ಗಂಟೆಗಳ ಕಾಲ ಚಿರತೆ ಮತ್ತು ವೃದ್ಧೆ ಒಂದೇ ಕೊಠಡಿಯಲ್ಲಿದ್ದರೂ ಯಾವುದೇ ಅನಾಹುತ ಸಂಭವಿಸದಿರುವುದು ಪವಾಡವೇ ಸರಿ.
ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಮನೆ ಕೆಲಸದಾಕೆ ಕಸ ಗುಡಿಸಲು ಹೋದಾಗ ಮಂಚದ ಕೆಳಗೆ ಚಿರತೆ ಇರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸುರೇಶ್ ಪತ್ನಿ ಸುಜಾತ, ನಡೆಯಲು ಅಶಕ್ತರಾಗಿದ್ದ ಅತ್ತೆಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದು ಕೊಠಡಿಯ ಬಾಗಿಲು ಭದ್ರಪಡಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಚಿರತೆ ಕಾರ್ಯಪಡೆ, ಎಸಿಎಫ್ ರವೀಂದ್ರ ಹಾಗೂ ಮೃಗಾಲಯದ ಪಶುವೈದ್ಯಾಧಿಕಾರಿ ಡಾ. ಶಶಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿತು.
ಸುಮಾರು 2.5 ವರ್ಷ ಪ್ರಾಯದ ಈ ಗಂಡು ಚಿರತೆಗೆ ಎರಡು ಬಾರಿ ಅರವಳಿಕೆ ಚುಚ್ಚುಮದ್ದು ನೀಡಿ ಯಶಸ್ವಿಯಾಗಿ ಸೆರೆಹಿಡಿಯಲಾಯಿತು. ಸೆರೆ ಸಿಕ್ಕ ಚಿರತೆಯನ್ನು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ. “ನಾವು ಹಾಲ್‌ನಲ್ಲೇ ಇದ್ದರೂ ಚಿರತೆ ಒಳಬಂದದ್ದು ಗೊತ್ತಾಗಲಿಲ್ಲ, ದೇವರ ದಯೆಯಿಂದ ಪ್ರಾಣಾಪಾಯ ಸಂಭವಿಸಿಲ್ಲ” ಎಂದು ಸುಜಾತ ಅವರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಸಿದ್ದಾರ್ಥನಗರದ ನಿವಾಸಿಗಳು ಆತಂಕದಿಂದ ಮುಕ್ತರಾಗಿದ್ದಾರೆ.
