ಮೈಸೂರು, ಮಾರ್ಚ್ 28, 2026 : ಹೊರ ರಾಜ್ಯದ ಪೊಲೀಸರು ಮೈಸೂರಿನಲ್ಲಿ ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಅಜ್ಞಾತ ಸ್ಥಳದಲ್ಲಿ ಕುಳಿತು ಬೆದರಿಕೆ ಸಂದೇಶ ಕಳುಹಿಸುತ್ತಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ನಗರದ ಬೃಂದಾವನ ಬಡಾವಣೆ 6ನೇ ಕ್ರಾಸ್‌ನ ಮನೆಯೊಂದರ ಮೇಲೆ ದಾಳಿ ನಡೆಸಿದ ದೆಹಲಿ ಪೊಲೀಸರು, ಆರೋಪಿ ಶ್ರೀನಿವಾಸ್ ಎಂಬಾತನನ್ನು ಬಂಧಿಸಿದ್ದಾರೆ. ಆತನ ಬಳಿ ಇದ್ದ ಲ್ಯಾಪ್‌ಟಾಪ್ ವಶಕ್ಕೆ ಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಮೈಸೂರು ನಗರ ಸೇರಿದಂತೆ ದೇಶಾದ್ಯಂತ ನ್ಯಾಯಾಲಯಗಳು, ಶಾಲಾ-ಕಾಲೇಜು ಕಟ್ಟಡ, ಸರ್ಕಾರಿ ಕಚೇರಿಗಳಿಗೆ ಮೇಲಿಂದ ಮೇಲೆ ಬೆದರಿಕೆ ಸಂದೇಶಗಳು ರವಾನೆ ಆಗಿದ್ದವು. ಇ-ಮೇಲ್ ಸೇರಿದಂತೆ ಹಲವು ರೀತಿಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಸಂದೇಶಗಳನ್ನು ರವಾನಿಸಲಾಗಿತ್ತು. ಈ ಸಂಬಂಧ ಹಲವು ಠಾಣೆಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿದ್ದವು.
ಆರೋಪಿಯ ಜಾಡು ಹಿಡಿದು ಮೈಸೂರಿಗೆ ಆಗಮಿಸಿದ್ದ ದೆಹಲಿ ಪೊಲೀಸರು, ವಿವಿ ಪುರಂ ಠಾಣೆ ಪೊಲೀಸರ ಸಹಕಾರದೊಂದಿಗೆ ಬೃಂದಾವನ ಬಡಾವಣೆಯ ಮನೆಯ ಮೇಲೆ ದಾಳಿ ನಡೆಸಿದರು. ಆರೋಪಿಯನ್ನು ದೆಹಲಿಗೆ ಕರೆದೊಯ್ದಿದ್ದಾರೆ ಎಂದು ಗೊತ್ತಾಗಿದೆ.
