ಮೈಸೂರು, ಮಾರ್ಚ್ 27, 2026 : ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಾಗಿಲ್ಲ ಎಂದು ಮೈಸೂರು ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟ ಸ್ಪಷ್ಟಪಡಿಸಿದೆ. ಈ ನಾಲ್ಕು ಜಿಲ್ಲೆಗಳ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಸಮರ್ಪಕವಾಗಿ ಲಭ್ಯವಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಒಕ್ಕೂಟ ತಿಳಿಸಿದೆ.

ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ಪ್ರಕೃತಿ ಅನಿಲ ಸಚಿವಾಲಯ ಹಾಗೂ ಎಲ್ಲಾ ಆಯಿಲ್ ಮಾರ್ಕೆಟಿಂಗ್ ಕಂಪನಿಗಳಿಂದ ಇಂಧನ ಪೂರೈಕೆಗೆ ಸಂಪೂರ್ಣ ಸಹಕಾರ ದೊರೆಯುತ್ತಿದೆ. ನಿರಂತರವಾಗಿ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಸರಾಗವಾಗಿ ಲಭ್ಯವಾಗುತ್ತಿದೆ. ಈ ಕಾರಣದಿಂದ ಸಾರ್ವಜನಿಕರು ಅನಗತ್ಯವಾಗಿ ಗೊಂದಲಕ್ಕೀಡಾಗಿ, ಅವಸರದಲ್ಲಿ ಇಂಧನ ಖರೀದಿಸಲು ಮುಂದಾಗಬಾರದು ಎಂದು ಪದಾಧಿಕಾರಿಗಳು ವಿನಂತಿಸಿದ್ದಾರೆ.
ಮುಖ್ಯವಾಗಿ, ಪೆಟ್ರೋಲಿಯಂ ಉತ್ಪನ್ನಗಳನ್ನು ಅನಾವಶ್ಯಕವಾಗಿ ಸಂಗ್ರಹಿಸಿಟ್ಟುಕೊಳ್ಳುವುದು ಕಾನೂನುಬಾಹಿರವಾಗಿದೆ. ಅಸುರಕ್ಷಿತವಾಗಿ ಇಂಧನವನ್ನು ಶೇಖರಿಸಿಡುವುದರಿಂದ ಅಗ್ನಿ ಅನಾಹುತಗಳಂತಹ ದೊಡ್ಡ ಅಪಾಯಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದ ಕಾರಣ, ಸಾರ್ವಜನಿಕರು ಆತಂಕ ಬಿಟ್ಟು ಸಹಕರಿಸಬೇಕೆಂದು ಮೈಸೂರು ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
