ಮೈಸೂರು, ಮಾರ್ಚ್ 2, 2026 : ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಜೆಡಿಎಸ್ ನಾಯಕರ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಕ್ಕೆ ಶಾಸಕ ಎ. ಮಂಜು ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪ್ರೆಗ್ನೆಂಟ್ ಆಗಿ ಮಗು ಆದ ಮೇಲೆ ತಾಯಿ ಆ ಮಗುವಿನ ಬಗ್ಗೆ ಚಿಂತೆ ಮಾಡುತ್ತಾಳೆ. ಅದೇ ರೀತಿ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಇದೆ. ಹಾಗಾಗಿಯೇ ಎಲ್ಲರೂ ಅದನ್ನು ಹೇಳುತ್ತಿದ್ದಾರೆ” ಎಂದು ಸಮರ್ಥಿಸಿಕೊಂಡರು.
ಇದೇ ವೇಳೆ ಆರ್. ಅಶೋಕ್ ಅವರಿಗೆ ಸವಾಲು ಹಾಕಿದ ಎ. ಮಂಜು ಅವರು, “ಕುಮಾರಸ್ವಾಮಿ ಅವರು ಸಿಎಂ ಆಗಲಿ ಎಂದು ನಮ್ಮ ಪಕ್ಷದವರು ಧೈರ್ಯದಿಂದ ಹೇಳುತ್ತಾರೆ. ಆದರೆ ಆರ್. ಅಶೋಕ್ ಅವರು ಸಿಎಂ ಆಗಲಿ ಎಂದು ಅವರ ಪಕ್ಷದವರು (ಬಿಜೆಪಿ) ಯಾರಾದರೂ ಹೇಳಿದ್ದಾರಾ ಅಥವಾ ಮುಂದೆ ಹೇಳುತ್ತಾರಾ?” ಎಂದು ಪ್ರಶ್ನಿಸಿದರು. ಅಂತಿಮವಾಗಿ ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಪಕ್ಷದ ಹಿರಿಯ ನಾಯಕರು ಸೂಕ್ತ ಸಮಯದಲ್ಲಿ ತೀರ್ಮಾನಿಸುತ್ತಾರೆ ಎಂದು ಅವರು ತಿಳಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಅಲ್ಲಿನ ಪ್ರದೇಶಗಳಲ್ಲಿ ಸಿಲುಕಿರುವ ಕನ್ನಡಿಗರು ಕ್ಷೇಮವಾಗಿದ್ದಾರೆ ಎಂದು ಮಾಹಿತಿ ನೀಡಿದರು. “ನಾನು ದುಬೈನಲ್ಲಿರುವ ಎಂಎಲ್ಸಿ ಭೋಜೇಗೌಡ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ, ಅವರು ತಾವು ಕ್ಷೇಮವಾಗಿರುವುದಾಗಿ ತಿಳಿಸಿದ್ದಾರೆ. ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿದೆ. ಈ ಹಿಂದೆಯೂ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತಂದಿದ್ದರು. ಆ ನಂಬಿಕೆ ಮತ್ತು ಗೌರವ ಎಲ್ಲರಿಗೂ ಇದೆ” ಎಂದು ಹೇಳಿದರು.
