ಕಡೂರು: ಪಟ್ಟಣದ ಛತ್ರದ ಬೀದಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ದುರ್ಗಾ ದೇವಿಯನ್ನು ವಿಜಯದಶಮಿಯಂದು ಕೆ.ಹೊಸಹಳ್ಖಿಯ ಕಲ್ಯಾಣಿಯಲ್ಲಿ ವಿಸರ್ಜಿಸಲಾಯಿತು.
ಕಳೆದ ಹತ್ತು ದಿನಗಳಿಂದ ಪ್ರತಿನಿತ್ಯ ಸಾಂಪ್ರದಾಯಿಕ ಪೂಜೆ ಮತ್ತು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ಮಗಳನ್ನು ಆಯೋಜಿಸಲಾಗಿತ್ತು. ದೇವಿಯನ್ನು ಆಲಂಕೃತ ವಾಹನದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಗೆ ಡ್ರಂಸೆಟ್, ಚಂಡೆಮೇಳ,ಗೊಂಬೆಮೇಳ ವಿವಿಧ ಪ್ರಕಾರಗಳ ಕಲಾತಂಡಗಳು ಮೆರಗು ನೀಡಿದವು. ರಸ್ತೆಯ ಇಕ್ಕೆಲಗಳಲ್ಲಿ ಮಹಿಳೆಯರು ದೇವಿಗೆ ಆರತಿ ಎತ್ತುವ ಮೂಲಕ ವಿಶೇಷ ಪೂಜೆಯನ್ನು ಸಮರ್ಪಿಸಿದರು. ಪಟ್ಟಣದ ಚೆಕ್ ಪೋಸ್ಟ್ ಬಳಿ ಪ್ರತಿ ವರ್ಷದಂತೆ ದೇವಿಯ ಬೆಳ್ಳಿ ಬಾವುಟದ ಹರಾಜು ಮಾಡಲಾಯಿತು. ಹೀರಾ ಹಾರ್ಡ್ ವೇರ್ ಮಾಲೀಕ ರಾಕೇಶ್ ಕುಮಾರ್ ಅವರು 1.33ಲಕ್ಷಕ್ಕೆ ಹರಾಜಿನಲ್ಲಿ ಬಾವುಟವನ್ನು ತಮ್ಮದಾಗಿಸಿಕೊಂಡರು.
ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ತಾಲ್ಲೂಕಿನಲ್ಲಿ ಆವರಿಸಿರುವ ಬರ ಪರಿಸ್ಥಿತಿ ದೂರವಾಗಿ ಸಮೃದ್ಧಿ ದೊರೆಯಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಶ್ರೀ ದುರ್ಗಾ ಸೇವಾ ಸಮಿತಿಯ ಅಧ್ಯಕ್ಷ ಕೆ.ಪಿ. ವೆಂಕಟೇಶ್, ಸಮಿತಿಯ ಪದಾಧಿಕಾರಿಗಳಾದ ಭದ್ರಿಸ್ವಾಮಿ, ಅಡಿಕೆ ಚಂದ್ರು, ಕೆ.ಪಿ.ಶ್ರೀನಿವಾಸ್, ಸೋಮೇಶ್ ಶಿವಮೊಗ್ಗೆ, ಯತಿರಾಜ್, ಎಚ್.ಆರ್. ದೇವರಾಜ್, ಹಳೇಪೇಟೆ ರಂಗನಾಥ್, ವಿಕಾಸ್, ನಾಗೇಂದ್ರ, ಗೌತಮ್, , ಆಕಾಶ್, ರಾಜು, ಶ್ರೇಯಸ್, ಚೇತನ್, ರಘು, ನಲ್ಲೂರಿ ಸುರೇಶ್, ಕೋಟೆ ಭರತ್, ನೂತನ್, ಗೋಪಿ ಇದ್ದರು.
ಗಮನಸೆಳೆದ ದುರ್ಗಾರತಿ: ದುರ್ಗಾ ಸೇವಾ ಸಮಿತಿ ಕಡೂರು ದಸರಾ ಕಲ್ಪನೆಯಲ್ಲಿ ವಿಸರ್ಜನಾ ಮಹೋತ್ಸವದ ಮೆರವಣಿಗೆಯಲ್ಲಿ ಸಮಿತಿಯು ಪ್ರಥಮಬಾರಿಗೆ ವಾರಣಾಸಿಯ ಸತ್ಯತಿವಾರಿ ತಂಡದವರಿಂದ ದೇವಿಗೆ ದುರ್ಗಾರತಿಯನ್ನು ಏರ್ಪಡಿಸಿದ್ದು ವಿಶೇಷವಾಗಿತ್ತು.
