ವಿಶ್ವವಿಖ್ಯಾತ ಮೈಸೂರು ದಸರಾ ಕನ್ನಡ ನಾಡಿನ ಹೆಮ್ಮೆ. ನಾಲ್ಕು ಶತಮಾನಗಳಿಗೂ ಮೀರಿದ ಸಾಂಸ್ಕೃತಿಕ ಪರಂಪರೆಯ ಪ್ರತೀಕ. ರಾಜವೈಭವದಿಂದ ಪ್ರಜಾಪ್ರಭುತ್ವದ ಜನೋತ್ಸವದವರೆಗೆ ಬೆಳೆದು ಬಂದ ನಾಡಹಬ್ಬ, ಇಂತಹ ಮೈಸೂರು ದಸರಾ-2026 ಈ ಬಾರಿ ಹಲವು ಹೊಸತನದ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ. ಸಿಎಂ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಿ ಮೊದಲ ದಸರಾ. ಹೀಗಾಗಿ ಈ ಬಾರಿಯ ದಸರಾ ಬಗ್ಗೆ ಜನರಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದವು. ಆ ನಿರೀಕ್ಷೆಗಳ ನಡುವೆ ಸಾಂಪ್ರದಾಯಿಕ ಆಚರಣೆಗಳ ಜೊತೆಗೆ ನವನವೀನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದಸರಾಕ್ಕೆ ಮತ್ತಷ್ಟು ಮೆರುಗು ನೀಡಲಾಯಿತು.
ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಆರಂಭವಾದ ದಸರಾ ಸಂಭ್ರಮ, ಅರಮನೆಯ ಅಂಗಳದಲ್ಲಿ ಜಂಬೂ ಸವಾರಿ, ನಗರದ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ದಸರಾ, ಫಲಪುಷ್ಪ ಪ್ರದರ್ಶನ, ವಸ್ತುಪ್ರದರ್ಶನ, ಕುಸ್ತಿ ಪಂದ್ಯಾವಳಿ, ಕರಾವಳಿಯ ಕಂಬಳ ಹಾಗೂ ಬನ್ನಿಮಂಟಪದ ಪಂಜಿನ ಕವಾಯತಿನವರೆಗೆ ವಿಸ್ತರಿಸಿತು. ದೇಶದ ವಿವಿಧ ಭಾಗಗಳ ಕಲಾವಿದರು, ಸೇನೆಯ ಬ್ಯಾಂಡ್ಗಳು, ಕನ್ನಡ ಚಿತ್ರರಂಗದ ತಾರೆಯರು, ಹೊರರಾಜ್ಯಗಳ ಸಾಂಸ್ಕೃತಿಕ ಸ್ತಬ್ಧಚಿತ್ರಗಳು ಹಾಗೂ ನೆರೆರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿ ಈ ಬಾರಿಯ ದಸರಾದ ವಿಶೇಷತೆಗಳನ್ನು ಹೆಚ್ಚಿಸಿತು.
ಗವಿಮಠದ ಶ್ರೀಗಳಿಂದ ದಸರಾ ಉದ್ಘಾಟನೆ
ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ನಾಡಹಬ್ಬವನ್ನ ಉದ್ಘಾಟಿಸಿದ್ದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ನಿ ಉಷಾ ಅವರೊಂದಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ‘ನಾಡಿನಲ್ಲಿ ಉತ್ತಮ ಮಳೆ, ಸಮೃದ್ಧ ಬೆಳೆ, ಜನರ ಸುಖ-ಶಾಂತಿ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಪ್ರಾರ್ಥಿಸಿದರು’.
