ಮಂಡ್ಯ : ಮದ್ದೂರಿನ ಬಿಸಿಎಂ ಹಾಸ್ಟೆಲ್‌ನ ನಿವೃತ್ತ ಅಧೀಕ್ಷಕ ಶಿವರಾಜ್ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದು, ಶಿವರಾಜ್ ಅವರ ಮನೆ ಮತ್ತು ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ . ಆದಾಯ ಮೀರಿ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಮಂಡ್ಯದ ಮದ್ದೂರಿನ ವಿನಾಯಕ ಬಡಾವಣೆಯಲ್ಲಿರುವ ಶಿವರಾಜ್ ಅವರ ನಿವಾಸ ಹಾಗೂ ಫಾರ್ಮ್ ಹೌಸ್ ಮೇಲೆ ದಾಳಿ ವೇಲೆ ನಗದು, ಚಿನ್ನಾಭರಣ ಮತ್ತು ಇತರ ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ.
ಬಿಸಿಎಂ ಹಾಸ್ಟೆಲ್‌ನ ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ದಿನಸಿ ಸಾಮಗ್ರಿಗಳಾದ ಅಕ್ಕಿ, ಬೇಳೆ, ಎಣ್ಣೆ ಮುಂತಾದ ಅಗತ್ಯ ವಸ್ತುಗಳು ಶಿವರಾಜ್ ಅವರ ಮನೆಯಲ್ಲಿ ಪತ್ತೆಯಾಗಿವೆ. 2 ವರ್ಷಗಳ ಹಿಂದೆ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದಿಂದ ಅಧಿಕಾರಿಗಳಿಗೆ ಹಾಗೂ ವಿಐಪಿಗಳಿಗೆ ನೀಡಲು ಬಂದಿದ್ದ ಉಡುಗೊರೆ ಬಾಕ್ಸ್‌ಗಳು ಕೂಡ ಶಿವರಾಜ್ ಅವರ ಮನೆಯಲ್ಲಿ ಮತ್ತು ಫಾರ್ಮ್ ಹೌಸ್‌ನಲ್ಲಿ ಸಿಕ್ಕಿವೆ. ಲೋಕಾಯುಕ್ತ ಅಧಿಕಾರಿಗಳು ಪತ್ತೆಯಾದ ಎಲ್ಲಾ ದಾಖಲೆಗಳು, ಆಸ್ತಿ ಪತ್ರಗಳು ಮತ್ತು ವಸ್ತುಗಳ ಸಮಗ್ರ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ಸ್ಥಳಕ್ಕೆ ಜೆರಾಕ್ಸ್ ಯಂತ್ರ ಮತ್ತು ಸ್ಕ್ಯಾನರ್ ಕೊಂಡೊಯ್ಯಲಾಗಿದ್ದು, ದಾಖಲೆಗಳ ಪ್ರತಿಗಳನ್ನು ಪಡೆದು ಡಿಜಿಟಲೀಕರಣ ಮಾಡುವ ಕೆಲಸವನ್ನ ನಡೆಸಲಾಗಿದೆ.
