ಮೈಸೂರು, ಅಕ್ಟೋಬರ್ 15: ಕಳೆದ ವರ್ಷ ಮೈಸೂರು ದಸರಾ ಮಹೋತ್ಸವ ವೇಳೆ ಬಲೂನ್ ಮಾರಲು ಬಂದಿದ್ದ 9 ವರ್ಷದ ಬಾಲಕಿಯನ್ನ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಕೃತ್ಯ ಎಸಗಿದ್ದ ಕಾರ್ತಿಕ್(32) ಅಪರಾಧಿ ಎಂದು ಇದೀಗ ಸಾಬೀತಾಗಿದ್ದು, ದೋಷಿ ಎಂದು ಪರಿಗಣಿಸಿರುವ ಮೈಸೂರು ಶೀಘ್ರಗತಿ ನ್ಯಾಯಾಲಯ, ನಾಳೆ ಕಾರ್ತಿಕ್ಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. ಅಂದು ದಸರಾ ಸಮಯದಲ್ಲೇ ಕೃತ್ಯವೆಸಗಿದ್ದ ಆರೋಪಿಗೆ ಇದೀಗ ದಸರಾ ಮಹೋತ್ಸವ ಸಮಯದಲ್ಲೇ ಶಿಕ್ಷೆ ವಿಧಿಸಿರುವುದು ವಿಶೇಷ.
ಮೈಸೂರಿನ ನಜರಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ 24 ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಮೈಸೂರಿನ FTSC-1 ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಜಯಂತಿ ವಾದ ಮಂಡಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆ ಕಾರ್ತಿಕ್ ಅಪರಾಧಿ ಎಂದು ನ್ಯಾ.ಅನಿಲ್.ಪಿ ವಘಾಢೆ ಅವರು ತೀರ್ಪು ನೀಡಿದ್ದು, ನಾಳೆ ನ್ಯಾಯಾಧೀಶರು ಅಪರಾಧಿ ಕಾರ್ತಿಕ್ಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿದ್ದಾರೆ.
ಮೈಸೂರಿನ ದಸರಾ ಜನರು ಪಾಲಿಗೆ ಕೇವಲ ಕಣ್ಮನ ಸೆಳೆಯುವ ಹಬ್ಬವಾದರೆ, ವ್ಯಾಪಾರಿಗಳ ಪಾಲಿಗೆ ಇದು ಹೊಟ್ಟೆ ತುಂಬಿಸೋ ಹಬ್ಬ. ಇದೇ ದಸರಾದಲ್ಲಿ ವ್ಯಾಪಾರಕ್ಕೆ ಅಂತಾ ದೂರದ ಊರುಗಳಿಂದ ಜನ ಬರ್ತಾರೆ. ಹೀಗೆ ಬಲೂನ್, ಬೊಂಬೆ ಮಾರಾಟಕ್ಕೆ ಹಕ್ಕಿಬಿಕ್ಕಿ ಜನಾಂಗದವರು ಬಂದಿದ್ದರು. ಅರಮನೆ ಮುಂಭಾಗ ದೊಡ್ಡಕೆರೆ ಮೈದಾನದಲ್ಲಿ ತಾತ್ಕಾಲಿಕ ಟೆಂಟ್ ಹಾಕಿಕೊಂಡು ವಾಸವಾಗಿದ್ದರು. ಹೀಗಿರುವಾಗಲೇ ಅಕ್ಟೋಬರ್ 9ರ ಬೆಳಗಿನಜಾವ ಘೋರ ಘಟನೆಯೊಂದು ನಡೆದಿತ್ತು. ಪೋಷಕರ ಜೊತೆಗಿದ್ದ ಬಾಲಕಿಯನ್ನ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ.
