ಮೈಸೂರು, ಫೆಬ್ರವರಿ 5, 2026: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಮೈಸೂರಿನ ಇಬ್ಬರು ಪ್ರಭಾವಿ ಅಧಿಕಾರಿಗಳ ಮನೆ ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ಮೈಸೂರು ಮಹಾನಗರ ಪಾಲಿಕೆಯ ಜೂನಿಯರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಚಂದ್ರಶೇಖರ್ ಹಾಗೂ ಎಲೆಕ್ಟ್ರಿಕ್ ಇನ್ಸ್‌ಪೆಕ್ಟರ್ ಅಲ್ತಾಫ್ ಹುಸೇನ್ ಜಖಾರ್ತಿ ಎಂಬುವವರೇ ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿಗಳು. ಮೈಸೂರಿನ ವಿಜಯನಗರದ ಒಂದನೇ ಹಾಗೂ ಎರಡನೇ ಹಂತ ಸೇರಿದಂತೆ ನಗರದ ಒಟ್ಟು ಆರು ಆಯಕಟ್ಟಿನ ಸ್ಥಳಗಳಲ್ಲಿ ಮತ್ತು ಟಿ. ನರಸೀಪುರದ ಒಂದು ಕಡೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ.

ಈ ಕಾರ್ಯಾಚರಣೆಯಲ್ಲಿ ಅಧಿಕಾರಿಗಳ ಆಸ್ತಿಪಾಸ್ತಿ, ಬ್ಯಾಂಕ್ ಖಾತೆಗಳು ಹಾಗೂ ಪ್ರಮುಖ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಏಕಕಾಲದಲ್ಲಿ ನಡೆದ ಈ ದಾಳಿಯು ಭ್ರಷ್ಟ ಅಧಿಕಾರಿಗಳ ವಲಯದಲ್ಲಿ ತಲ್ಲಣ ಮೂಡಿಸಿದ್ದು, ಪರಿಶೀಲನೆಯ ನಂತರವಷ್ಟೇ ಅಕ್ರಮ ಆಸ್ತಿಯ ಸಂಪೂರ್ಣ ವಿವರಗಳು ಹೊರಬೀಳಬೇಕಿದೆ.
