ಮೈಸೂರು, ಜುಲೈ 16, 2026 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಆದರೆ ವ್ಯಾಪಾರಿಗಳಗೆ ಯಾವುದೇ ಮುನ್ಸೂಚನೆ ನೀಡದೆ ಫುಟ್ ಪಾತ್ ಒತ್ತುವರಿಗೆ ಮುಂದಾಗಿರುವುದು ವ್ಯಾಪಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ನಗರದ ಎಂ.ಜಿ. ರಸ್ತೆಯ ಕೆಲ ಭಾಗಗಳಲ್ಲಿ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿದ ಪಾಲಿಕೆ ಸಿಬ್ಬಂದಿ, ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿದ್ದ ಹಣ್ಣಿನ ಅಂಗಡಿ, ಜ್ಯೂಸ್ ಅಂಗಡಿಗಳ ಮುಂದೆ ಇಟ್ಟಿದ್ದ ಚೇರ್ ಹಾಗೂ ಕಲ್ಲು ಚಪ್ಪಡಿಗಳನ್ನು ಜಪ್ತಿ ಮಾಡಿದರು. ಇದೇ ವೇಳೆ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ಅಳವಡಿಸಲಾಗಿದ್ದ ವಾಣಿಜ್ಯ ಮಂಡಳಿಗಳು ಹಾಗೂ ಬೋರ್ಡ್‌ಗಳನ್ನು ಸಹ ತೆರವುಗೊಳಿಸಲಾಯಿತು.
ಇನ್ನು ಕಾರ್ಯಾಚರಣೆ ವೇಳೆ ಸ್ಥಳೀಯ ಅಂಗಡಿ ಮತ್ತು ಆಸ್ಪತ್ರೆ ಮಾಲೀಕರು ಪಾಲಿಕೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಒತ್ತುವರಿ ತೆರವುಗೊಳಿಸುವ ಮುನ್ನ ಕನಿಷ್ಠ ಪಕ್ಷ ನೋಟಿಸ್ ನೀಡಬೇಕಿತ್ತು ಎಂದು ಆಸ್ಪತ್ರೆ ಮಾಲೀಕರೊಬ್ಬರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂಚಿತವಾಗಿ ಮಾಹಿತಿ ನೀಡಿದ್ದರೆ ತಾವೇ ಬೋರ್ಡ್‌ಗಳನ್ನು ತೆರವು ಮಾಡಿಕೊಳ್ಳುತ್ತಿದ್ದೆವು, ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕಾರ್ಯಾಚರಣೆ ನಡೆಸಿರುವುದರಿಂದ ತಮಗೆ ಭಾರಿ ನಷ್ಟವಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು. ಅಲ್ಲದೆ, ನಗರದ ಬೇರೆ ಕಡೆಗಳಲ್ಲಿ ಒತ್ತುವರಿ ತೆರವು ಮಾಡದೆ ಕೇವಲ ತಮ್ನನ್ನು ಗುರಿಯಾಗಿಸಿಕೊಂಡು ಈ ರಸ್ತೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಮಾಲೀಕರು ಅಧಿಕಾರಿಗಳನ್ನು ತರಾಟೆಗೆ ಪಡೆದ ಘಟನೆಯೂ ನಡೆಯಿತು.
