ಮೈಸೂರು, ಜುಲೈ 9, 2026 : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವೈಭವದಲ್ಲಿ ಈ ಬಾರಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಚಿಂತನೆ ನಡೆಸುತ್ತಿರುವುದಕ್ಕೆ ಮೈಸೂರಿನ ವಿವಿಧ ಸಂಘಟನೆಗಳು ಮತ್ತು ನಾಗರಿಕ ಸಮಾಜದ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪಾರಂಪರಿಕ ತಜ್ಞರು, ಪರಿಸರವಾದಿಗಳು, ರೈತ ಹಾಗೂ ದಲಿತ ನಾಯಕರು ಜಂಟಿಯಾಗಿ ಸಭೆ ನಡೆಸಿ, ಸರ್ಕಾರ ತನ್ನ ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಸಂಸ್ಕೃತಿಯ ಮೇಲೆ ಆಕ್ರಮಣದ ಆರೋಪ
ದಸರಾ ಮಹೋತ್ಸವವು ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ಬಿಂಬಿಸುವ ವೇದಿಕೆಯಾಗಿದೆ. ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಅಲ್ಲಿನ ಭೌಗೋಳಿಕ ಪರಿಸರದಲ್ಲಿ ಆಯೋಜಿಸುವುದೇ ಸೂಕ್ತ. ಅದನ್ನು ಮೈಸೂರಿನ ದಸರಾಕ್ಕೆ ತರುವುದು ಇಲ್ಲಿನ ಸಾಂಸ್ಕೃತಿಕ ಅಸ್ಮಿತೆಗೆ ಮಾಡುವ ಅವಮಾನ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಹೇಳಿಕೆ ನೀಡಿರುವ ಹಿರಿಯ ಪಾರಂಪರಿಕ ತಜ್ಞ ಪ್ರೊ. ರಂಗರಾಜು ಹಾಗೂ ಚಿಂತಕ ಮ. ಗು. ಸದಾನಂದಯ್ಯ ಅವರು, “ದಸರಾ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಹೊಂದಿದೆ. ಅನಗತ್ಯವಾಗಿ ಬೇರೆ ಭಾಗದ ಕ್ರೀಡೆಗಳನ್ನು ಇಲ್ಲಿ ತುರುಕುವುದು ದಸರೆಯ ಘನತೆಯನ್ನು ಕಡಿಮೆ ಮಾಡುತ್ತದೆ” ಎಂದು ಅಭಿಪ್ರಾಯಪಟ್ಟರು.

ಪರಿಸರ ಮತ್ತು ಆಡಳಿತಾತ್ಮಕ ಆಕ್ಷೇಪಣೆಗಳು
ಪರಿಸರವಾದಿಗಳಾದ ಪರಶುರಾಮೇಗೌಡ, ಭಾನು ಮೋಹನ್ ಮತ್ತು ಅಕ್ಬರ್ ಮಾತನಾಡಿ, ಕಂಬಳದಂತಹ ಕ್ರೀಡೆಗಳನ್ನು ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಆಯೋಜಿಸುವುದರಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳು ಮತ್ತು ಪ್ರಾಣಿಗಳ ಸಂಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನು ರೈತ ಮುಖಂಡ ಬಡಗಲಪುರ ನಾಗೇಂದ್ರ ಹಾಗೂ ದಲಿತ ನಾಯಕ ಬೆಟ್ಟಯ್ಯಕೋಟೆ ಅವರು ಮಾತನಾಡಿ, “ರಾಜ್ಯ ಸರ್ಕಾರ ಇಂತಹ ವಿವಾದಾತ್ಮಕ ನಿರ್ಧಾರಗಳನ್ನು ಕೈಬಿಟ್ಟು, ದಸರೆಯನ್ನು ಮೈಸೂರಿನ ಮೂಲ ಪರಂಪರೆಗೆ ಧಕ್ಕೆಯಾಗದಂತೆ ನಡೆಸಬೇಕು. ಕಂಬಳ ಆಯೋಜಿಸುವ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯ ಎಚ್ಚರಿಕೆ
ಮೈಸೂರಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ವಲಯದಲ್ಲಿ ಈಗ ಕಂಬಳದ ವಿಚಾರ ದೊಡ್ಡ ಚರ್ಚೆಯಾಗಿ ಮಾರ್ಪಟ್ಟಿದೆ. ಪ್ರಮುಖ ಸಂಘಟನೆಗಳು ಒಗ್ಗೂಡಿ ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದು, ಮುಂಬರುವ ದಿನಗಳಲ್ಲಿ ಈ ವಿಚಾರವು ರಾಜಕೀಯ ಹಾಗೂ ಸಾಮಾಜಿಕವಾಗಿ ಹೆಚ್ಚಿನ ತಿರುವು ಪಡೆಯುವ ಸಾಧ್ಯತೆಯಿದೆ. ದಸರಾ ಮಹೋತ್ಸವದ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ವಿರೋಧದ ಧ್ವನಿಗಳು ಸರ್ಕಾರದ ಮಟ್ಟದಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಕಾದು ನೋಡಬೇಕಿದೆ.
