ಮೈಸೂರು, ಜುಲೈ 3, 2026 : ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಸ್ಪರ್ಧೆ ಆಯೋಜಿಸಲು ಮುಂದಾಗಿರುವುದಕ್ಕೆ ರೈತ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿನಿಧಿ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ರೈತ ಮುಖಂಡರಾದ ಕುರುಬೂರು ಶಾಂತಕುಮಾರ್ ಹಾಗೂ ಬರಡನಪುರ ನಾಗರಾಜು, ರಾಜ್ಯದಲ್ಲಿ ಈ ಬಾರಿ ಸಮರ್ಪಕ ಮಳೆಯಾಗದ ಕಾರಣ ಬರಗಾಲದ ಮುನ್ಸೂಚನೆ ಕಂಡುಬಂದಿದ್ದು, ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ ಎಂದು ಹೇಳಿದರು.
ರಾಜ್ಯದ ರೈತರು ಈಗಾಗಲೇ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.
ಮೈಸೂರು ದಸರಾ ಮಹೋತ್ಸವಕ್ಕೆ ತನ್ನದೇ ಆದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವಿದ್ದು, ಕಂಬಳಕ್ಕೂ ಕರಾವಳಿ ಭಾಗದಲ್ಲಿ ತನ್ನದೇ ಆದ ವಿಶಿಷ್ಟ ಪರಂಪರೆ ಮತ್ತು ಮಹತ್ವವಿದೆ. ಆದ್ದರಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳವನ್ನು ಆಯೋಜಿಸದೆ, ಕಂಬಳವನ್ನು ದಕ್ಷಿಣ ಕನ್ನಡ ಭಾಗದ ಸಾಂಪ್ರದಾಯಿಕ ಕ್ರೀಡೆಯಾಗಿಯೇ ಉಳಿಸಬೇಕು ಎಂದು ಅವರು ಪ್ರತಿಪಾದಿಸಿದರು.
