ನಂಜನಗೂಡು, ಜುಲೈ 3, 2026 : ಜಮೀನು ಪೋಡಿ ಹಾಗೂ ದುರಸ್ತಿ ಕೆಲಸ ಮಾಡಿಕೊಡಲು ಭಾರಿ ಮೊತ್ತದ ಲಂಚ ಪಡೆಯುತ್ತಿದ್ದ ನಂಜನಗೂಡು ತಾಲೂಕಿನ ಸರ್ವೇಯರ್ ಒಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಚಿಕ್ಕಯ್ಯನಛತ್ರ ಹೋಬಳಿ ಕೇಂದ್ರದ ಸರ್ವೇಯರ್ ಜಯಪ್ರಕಾಶ್ ಎಂಬುವವರೇ ನಗದು ಹಣದೊಂದಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ.
ಕಡಕೊಳ ಗ್ರಾಮದ ನಿವಾಸಿ ನಾರಾಯಣ ಎಂಬುವರಿಗೆ ಸೇರಿದ 9 ಗುಂಟೆ ಜಮೀನಿನ ಪೋಡಿ ಮತ್ತು ದುರಸ್ತಿ ಕಾರ್ಯವನ್ನು ಮಾಡಿಕೊಡಲು ಸರ್ವೇಯರ್ ಜಯಪ್ರಕಾಶ್ ಬರೋಬ್ಬರಿ 2 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟು ಡೀಲ್ ಕುದುರಿಸಿದ್ದರು. ಈ ಪೈಕಿ ನಾರಾಯಣ ಅವರು ಈಗಾಗಲೇ 80 ಸಾವಿರ ರೂಪಾಯಿಗಳನ್ನು ಮುಂಗಡವಾಗಿ ನೀಡಿದ್ದರು. ಉಳಿದ 1.20 ಲಕ್ಷ ರೂಪಾಯಿ ಹಣವನ್ನು ನೀಡುವಂತೆ ಸರ್ವೇಯರ್ ಜಯಪ್ರಕಾಶ್ ನಿರಂತರವಾಗಿ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
ಅಧಿಕಾರಿಯ ಈ ಲಂಚಬಾಕತನ ಹಾಗೂ ವರ್ತನೆಯಿಂದ ತೀವ್ರ ಬೇಸತ್ತ ನಾರಾಯಣ್ ಅವರು ಈ ಬಗ್ಗೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಯೋಜನೆಯಂತೆ ಮೈಸೂರಿನ ಪ್ರಸಿದ್ಧ ಮೈಲಾರಿ ಹೋಟೆಲ್‌ನಲ್ಲಿ ನಾರಾಯಣ್ ಅವರಿಂದ ಬಾಕಿ ಇದ್ದ 1.20 ಲಕ್ಷ ರೂಪಾಯಿ ಲಂಚದ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಜಯಪ್ರಕಾಶ್ ಅವರ ಮೇಲೆ ದಿಢೀರ್ ದಾಳಿ ನಡೆಸಿ, ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದ್ದು, ಸದ್ಯ ಆರೋಪಿ ಸರ್ವೇಯರ್‌ನನ್ನು ನಂಜನಗೂಡು ತಾಲೂಕು ಕಚೇರಿಗೆ ಕರೆತಂದು ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
