ತಿರುವನಂತಪುರಂ,ಜನವರಿ 30,2026 : ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ (P.T Usha) ಅವರ ಪತಿ ವಿ. ಶ್ರೀನಿವಾಸನ್ (67) ಇಂದು ನಿಧನರಾಗಿದ್ದಾರೆ.
ತಿಕ್ಕೋಡಿ ಪೆರುಮಾಳ್‌ಪುರಂನಲ್ಲಿರುವ ಅವರ ನಿವಾಸದಲ್ಲಿ ಜ.30ರ ನಡುರಾತ್ರಿ 1 ಗಂಟೆ ಸುಮಾರಿಗೆ ಕುಸಿದು ಬಿದ್ದಿದ್ದ ವಿ. ಶ್ರೀನಿವಾಸನ್ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹಾಗೂ ಘಟನೆಯ ಸಮಯದಲ್ಲಿ ಉಷಾ ಅವರು ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.
ಶ್ರೀನಿವಾಸನ್ ಅವರು ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಾನಿಯ ಕುಟ್ಟಿಕ್ಕಾಡ್‌ನ ವೆಂಗಲಿ ಥರಾವದ್‌ನ ನಾರಾಯಣನ್ ಮತ್ತು ಸರೋಜಿನಿ ದಂಪತಿಯ ಪುತ್ರ. ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಡೆಪ್ಯೂಟಿ ಎಸ್‌ಪಿಯಾಗಿ ನಿವೃತ್ತರಾಗಿದ್ದರು. 1991 ರಲ್ಲಿ ದೂರದ ಸಂಬಂಧಿಯಾಗಿದ್ದ ಪಿ.ಟಿ. ಉಷಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಡಾ. ಉಜ್ವಲ್ ವಿಘ್ನೇಶ್ ಎಂಬ ಮಗನಿದ್ದಾನೆ.
ಘಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಪಿ.ಟಿ ಉಷಾ ಅವರಿಗೆ ಕರೆ ಮಾಡಿ ಸಂತಾಪ ವ್ಯಕ್ತಪಡಿಸಿದರು. ದೇಶಾದ್ಯಂತ ಕ್ರೀಡಾ ಮತ್ತು ರಾಜಕೀಯ ವಲಯದಿಂದ ಸಂತಾಪ ವ್ಯಕ್ತವಾಗಿದೆ.
