ಮೈಸೂರು, ಜನವರಿ 21, 2026 : ವಿಶ್ವವಿಖ್ಯಾತ ಮೈಸೂರು ಸಿಲ್ಕ್ ಸೀರೆಗಳಿಗೆ ಸದ್ಯ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಸೀರೆ ಖರೀದಿಸಲು ನೂರಾರು ಜನರು ಮುಗಿಬೀಳುತ್ತಿದ್ದಾರೆ. ಮೈಸೂರಿನ ಕೆ.ಎಸ್.ಐ.ಸಿ (KSIC) ಕಾರ್ಖಾನೆ ಮುಂಭಾಗದಲ್ಲಿ ಈ ದೃಶ್ಯ ಕಂಡುಬಂದಿದ್ದು, ಸೀರೆ ಪಡೆಯಲು ಗ್ರಾಹಕರು ನಸುಕಿನ ಜಾವ 4 ಗಂಟೆಯಿಂದಲೇ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಸೀರೆ ಖರೀದಿಗಾಗಿ ವಿಶೇಷ ಟೋಕನ್ ವ್ಯವಸ್ಥೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ, ಟೋಕನ್ ಕೈತಪ್ಪಬಾರದೆಂಬ ಆತುರದಲ್ಲಿ ಜನರು ಕಿಲೋಮೀಟರ್‌ಗಟ್ಟಲೆ ಉದ್ದದ ಸರತಿ ಸಾಲಿನಲ್ಲಿ ಕಾದು ಕುಳಿತಿದ್ದಾರೆ. ಕಳೆದ ಕೆಲವು ದಿನಗಳಿಂದ ಕೆ.ಎಸ್.ಐ.ಸಿ ಮಾರಾಟ ಮಳಿಗೆಯ ಮುಂದೆ ಜನಜಂಗುಳಿ ಹೆಚ್ಚಾಗುತ್ತಿದ್ದು, ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಸದ್ಯ ಜನರು ಸರತಿ ಸಾಲಿನಲ್ಲಿ ನಿಂತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಮೈಸೂರು ಸಿಲ್ಕ್ ಮೇಲಿರುವ ಕ್ರೇಜ್‌ಗೆ ಸಾಕ್ಷಿಯಾಗಿದೆ.
