ಮೈಸೂರು, ಜನವರಿ 20, 2026 : ಮೈಸೂರು ನಗರ ಪೊಲೀಸ್ ಇಲಾಖೆಯ ವತಿಯಿಂದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚಾರಣೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಉದ್ಘಾಟಿಸಿ, ಸಂಚಾರ ನಿಯಮಗಳ ಪಾಲನೆಯ ಕುರಿತು ಮಹತ್ವದ ಮಾಹಿತಿ ನೀಡಿದರು.

ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಪೈಕಿ ಶೇಕಡಾ 75 ರಷ್ಟು ಮಂದಿ ದ್ವಿಚಕ್ರ ವಾಹನ ಸವಾರರೇ ಆಗಿರುವುದು ಆತಂಕಕಾರಿ ವಿಚಾರ ಎಂದು ಅವರು ತಿಳಿಸಿದರು.ಹೆಚ್ಚಿನ ಅಪಘಾತಗಳಲ್ಲಿ ಸವಾರರ ತಲೆಗೆ ತೀವ್ರವಾಗಿ ಪೆಟ್ಟು ಬೀಳುತ್ತಿರುವುದು ಸಾವಿಗೆ ಪ್ರಮುಖ ಕಾರಣವಾಗಿದ್ದು, ಹೆಲ್ಮೆಟ್ ಧರಿಸದಿರುವುದೇ ಇದಕ್ಕೆ ಮೂಲ ಕಾರಣ ಎಂದು ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದರು. ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯುನ್ಮಾನ ಮಾಧ್ಯಮಗಳ ಪ್ರತಿನಿಧಿಗಳಿಗೆ ಸಂಕೇತವಾಗಿ ಹೆಲ್ಮೆಟ್‌ಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಿಸಿಪಿ ಸುಂದರರಾಜ್, ಸಂಚಾರ ವಿಭಾಗದ ಎಸಿಪಿ ಶಿವಶಂಕರ್ ಸೇರಿದಂತೆ ಪೊಲೀಸ್ ಇಲಾಖೆಯ ಇನ್ನಿತರ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.
