ಬೆಂಗಳೂರು, ಜನವರಿ 14, 2026 : ರಾಜ್ಯ ರಾಜಧಾನಿ ಬೆಂಗಳೂರು ಬಾಂಗ್ಲಾ ಅಕ್ರಮ ನಿವಾಸಿಗಳ ತಾಣವಾಗಿದ್ದು, ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ. ಬಾಂಗ್ಲಾ ಪ್ರಜೆಗಳು ವಾಸಿಸುತ್ತಿದ್ದ ಶೆಡ್‌ಗಳ ಮೇಲೆ ಸರಣಿ ದಾಳಿ ಮಾಡಲಾಗಿದ್ದು ಬರೋಬ್ಬರಿ 71 ಮಂದಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾಗಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಮತ್ತು ಆನೇಕಲ್ ಉಪವಿಭಾಗದ ಪೊಲೀಸರು ಶಂಕಿತ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಸರಣಿ ಕಾರ್ಯಾಚರಣೆ ನಡೆಸಿ ಒಟ್ಟು 71 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.ಕಳೆದ ಒಂದು ವಾರದಿಂದ ಹಿಂದೂ ಕಾರ್ಯಕರ್ತರ ಮಾಹಿತಿ ಮೇರೆಗೆ ವಿವಿಧ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿದ್ದರು. ಕಳೆದ 2 ದಿನದಲ್ಲಿ ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ, ಬೇಗೂರು, ಆನೇಕಲ್, ಬನ್ನೇರುಘಟ್ಟ ಮತ್ತು ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಾಸಿಸುತ್ತಿದ್ದ ಬಾಂಗ್ಲಾ ಪ್ರಜೆಗಳನ್ನ ವಶಕ್ಕೆ ಪಡೆಯಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದಲ್ಲಿ 34 ಹಾಗೂ ಮತ್ತು ಆನೇಕಲ್ ಉಪವಿಭಾಗದಲ್ಲಿ 37 ಅಕ್ರಮ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರ ಪರಿಶೀಲನೆ ವೇಳೆ ನಕಲಿ ಪಾಸ್‌ಪೋರ್ಟ್, ಆಧಾರ್‌ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ಸೃಷ್ಟಿಸಿಕೊಂಡು ಬಾಂಗ್ಲಾದೇಶದಿಂದ ಭಾರತಕ್ಕೆ ಪ್ರವೇಶಿಸಿದ್ದರು ಎನ್ನಲಾಗಿದೆ.
ಅನೇಕರು ಗುಜರಿ ಗೋದಾಮುಗಳ ಶೆಡ್‌ಗಳಲ್ಲಿ ವಾಸವಿದ್ದು, ಕೆಲವರು ಅಪಾರ್ಟ್‌ಮೆಂಟ್‌ಗಳಲ್ಲಿ ಸೇರಿದಂತೆ ಇನ್ನಿತರೆ ಕೆಲಸ ಮಾಡುತ್ತಿದ್ದರು. ಇನ್ನೂ ಕೆಲವರು ರಾತ್ರಿ ಸಮಯದಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
