ಚಿತ್ರದುರ್ಗ, ಜನವರಿ 16, 2026 : ಕಾಂಗ್ರೆಸ್ಸಿಗರ ಕುರ್ಚಿ ಕಾದಾಟದಿಂದ ರಾಜ್ಯದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ನಿಜವಾಗಿ ಏನೂ ಅಭಿವೃದ್ಧಿ ಆಗಿಲ್ಲ; ಕಾಂಗ್ರೆಸ್ಸಿನ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ಕೊಟ್ಟರು. ನಿನ್ನೆ ಜರ್ಮನಿಯ ಚಾನ್ಸೆಲರ್ ಕರ್ನಾಟಕಕ್ಕೆ ಬಂದಿದ್ದರು. ಜರ್ಮನಿಯು ಉತ್ಪಾದನಾ ಹಬ್ ಆಗಿರುವ ತಂತ್ರಜ್ಞಾನದ ದೇಶ. ಅಂಥ ದೇಶದ ಚಾನ್ಸೆಲರ್ ಕರ್ನಾಟಕಕ್ಕೆ ಬಂದರೆ, ಇವರಲ್ಲಿ ಒಬ್ಬರು ಸಿಎಂ ಕುರ್ಚಿ ಉಳಿಸಿಕೊಳ್ಳಲು, ಇನ್ನೊಬ್ಬರು ಅದೇ ಕುರ್ಚಿ ಕಸಿದುಕೊಳ್ಳಲು ಹೋಗಿ ರಾಹುಲ್ ಗಾಂಧಿ ಜೊತೆ ನಿಂತುಕೊಂಡಿದ್ದಾರೆ. ಇದರಂದ ರಾಜ್ಯದ ಪರಿಸ್ಥಿತಿ ಏನಾಗಬೇಕು ಎಂದು ಕೇಳಿದರು.
ಇದೆಲ್ಲವನ್ನೂ ರಾಜ್ಯದ ಜನರು ಗಮನಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಉತ್ತರ ನೀಡುತ್ತಾರೆ ಎಂದು ತಿಳಿಸಿದರು. ಕಾಂಗ್ರೆಸ್ಸಿನಲ್ಲಿ ಆಂತರಿಕ ಕಚ್ಚಾಟ ಇದೆ. ಒಬ್ಬರು ಕುರ್ಚಿ ಉಳಿಸಿಕೊಳ್ಳಲು ಕಾತುರದಲ್ಲಿದ್ದಾರೆ. ನನ್ನ ತಾಳ್ಮೆ ಕೆಣಕಬೇಡಿ; ನಾನು ಸಿಎಂ ಆಗಬೇಕೆಂದು ಉಳಿದವರು ರೆಡಿ ಆಗಿದ್ದಾರೆ ಎಂದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿ, ಜನಾರ್ದನ ರೆಡ್ಡಿ, ಶ್ರೀರಾಮುಲು ಅವರಷ್ಟೇ ಅಲ್ಲ; ರಾಜ್ಯದ ಪ್ರಮುಖರ ಜೊತೆ ಚರ್ಚೆ ಮಾಡಿದಾಗ ನಾವೆಲ್ಲರೂ ಬಳ್ಳಾರಿ ಪಾದಯಾತ್ರೆ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯ ಬಹುತೇಕ ಎಲ್ಲರದೂ ಆಗಿದೆ. ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನಿಸಬೇಕಾಗಿದೆ ಎಂದು ನುಡಿದರು. ನಾನು ಈಗಾಗಲೇ ಈ ಕುರಿತು ಪಕ್ಷದ ದೆಹಲಿ ವರಿಷ್ಠರಿಗೆ ಮಾತನಾಡಿದ್ದೇನೆ. ಇವತ್ತು, ನಾಳೆಯೊಳಗೆ ಅದರ ಬಗ್ಗೆ ಸಂದೇಶವುಳ್ಳ ಮಾಹಿತಿ ಬರಲಿದೆ ಎಂದು ತಿಳಿಸಿದರು.
17ರಂದು ಬಳ್ಳಾರಿಯಲ್ಲಿ ಬೃಹತ್ ಹೋರಾಟ
17ರಂದು ಬೃಹತ್ ಹೋರಾಟಕ್ಕೆ ಜನಾರ್ದನ ರೆಡ್ಡಿ, ಶ್ರೀರಾಮುಲು, ಪಕ್ಷದ ಹಿರಿಯ ನಾಯಕರು ಬರಲಿದ್ದಾರೆ. ಕಾಂಗ್ರೆಸ್ ಸರಕಾರದ ವೈಫಲ್ಯಗಳು, ಭ್ರಷ್ಟಾಚಾರ, ರಾಜ್ಯದಲ್ಲಿನ ಅರಾಜಕತೆ ಸೃಷ್ಟಿ, ರಾಜ್ಯದ ರೈತರ ಸಮಸ್ಯೆ, ಡ್ರಗ್ಸ್ ಹಾವಳಿ- ಇವೆಲ್ಲ ವಿಚಾರಗಳನ್ನು ತೆಗೆದುಕೊಂಡು ರಾಜ್ಯದಲ್ಲಿ ವಿವಿಧ ಹಂತದ ಹೋರಾಟ ಮಾಡಲು ಪಕ್ಷ ಈಗಾಗಲೇ ನಿರ್ಧರಿಸಿದೆ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಬೃಹತ್ ಹೋರಾಟವನ್ನು ಇದೇ 17ರಂದು ನಾವು ಹಮ್ಮಿಕೊಂಡಿದ್ದೇವೆ ಎಂದು ವಿವರಿಸಿದರು.
ಗ್ರಾಮ ಮಟ್ಟದಲ್ಲೇ ಯೋಜನೆಗಳ ತೀರ್ಮಾನ
ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಒಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ಮನ್ ರೇಗಾ ಬದಲು ವಿಕಸಿತ ಭಾರತ ಜಿ ರಾಮ್ ಜಿ ಎಂದು ಕೇವಲ ಹೆಸರು ಬದಲಿದ್ದಾರೆ. ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಅಥವಾ ಗ್ರಾಮಗಳ ಅಭಿವೃದ್ಧಿ ಆದಾಗ ದೇಶ ಅಭಿವೃದ್ಧಿ ಆಗುತ್ತದೆ ಎಂಬ ಕನಸು ನನಸು ಮಾಡುವ ನಿಟ್ಟಿನಲ್ಲಿ ಹೊರಟಿದ್ದಾರೆ. 2006ರಲ್ಲಿ ಆರಂಭವಾದ ಮನ್‍ರೇಗಾ ಯೋಜನೆಯಡಿ ಹಗರಣಗಳು, ಭ್ರಷ್ಟಾಚಾರ, ಕೂಲಿಕಾರರಿಗೆ ಹಣ ತಲುಪದೇ ಇರುವುದು ನಡೆದಿತ್ತು ಎಂದು ಆಕ್ಷೇಪಿಸಿದರು.
ವಿಬಿ ಜಿ ರಾಮ್ ಜಿ ಅಡಿಯಲ್ಲಿ ಗ್ರಾಮೀಣ ಭಾಗದಲ್ಲಿ ಆಸ್ತಿ ನಿರ್ಮಾಣ, ಅಭಿವೃದ್ಧಿ ಆಗಬೇಕು. ರೈತರ ಅನಾನುಕೂಲ ತಪ್ಪಿಸಲು ಕೃಷಿ ಚಟುವಟಿಕೆ ಸಂದರ್ಭದಲ್ಲಿ 60 ದಿನಗಳ ಕಾಲ ಕೂಲಿಗೆ ಅವಕಾಶ ನೀಡದೇ ರಜೆ ಕೊಟ್ಟಿದ್ದಾರೆ. ಹಿಂದೆಯೂ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ತೀರ್ಮಾನ ಆಗುತ್ತಿತ್ತು. ಮುಂದಿನ ದಿನಗಳಲ್ಲೂ ಅದೇ ಆಗಲಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ಕಾಂಗ್ರೆಸ್ ಪಕ್ಷ, ಸಿದ್ದರಾಮಯ್ಯನವರು, ರಾಹುಲ್ ಗಾಂಧಿಯವರು ಜಿ ರಾಮ್ ಜಿ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಬಗ್ಗೆ ಜನರ ವಿಶ್ವಾಸ ಹೊರಟುಹೋಗಿದೆ. ಹಾಗಾಗಿ, ಮಹಾತ್ಮ ಗಾಂಧೀಜಿ ಅವರನ್ನು ಎರಡನೇ ಬಾರಿಗೆ ಕೊಲೆ ಮಾಡುತ್ತಿದ್ದಾರೆಂದು ಅಪಪ್ರಚಾರ ಮಾಡಲು ಹೊರಟಿದ್ದಾರೆ. ಇದಕ್ಕೆ ಬಿಜೆಪಿ, ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳು, ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ ಎಂದು ನುಡಿದರು.
