ಮೈಸೂರು, ಜನವರಿ 7, 2026 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪುಂಡರ ಹಾವಳಿ ಮಿತಿಮೀರಿದ್ದು, ಸಾರ್ವಜನಿಕ ರಸ್ತೆಗಳಲ್ಲಿ ಪ್ರಾಣಾಪಾಯಕಾರಿಯಾಗಿ ಬೈಕ್ ವೀಲಿಂಗ್ ಮಾಡುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ.

ನಗರದ ಪ್ರಮುಖ ರಸ್ತೆಯಾದ ಸಯ್ಯಾಜಿರಾವ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ವಿಶೇಷವೆಂದರೆ, ಸ್ಥಳದಲ್ಲಿ ಪೊಲೀಸರು ಇರುವಾಗಲೇ ಕಿಡಿಗೇಡಿ ಯುವಕರು ಯಾವುದೇ ಭಯವಿಲ್ಲದೆ ತಮ್ಮ ಬೈಕ್ ಮುಂಭಾಗದ ಚಕ್ರ ಎತ್ತಿ ‘ಡೆಡ್ಲಿ ವೀಲಿಂಗ್’ ಪ್ರದರ್ಶನ ನೀಡಿದ್ದಾರೆ. ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿರುವ ಈ ಯುವಕರ ಸಾಹಸದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ತಮ್ಮ ಅಪಾಯಕಾರಿ ಸಾಹಸಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿರುವ ಈ ಪುಂಡರು, ಜನಪ್ರಿಯತೆಗಾಗಿ ಅವುಗಳನ್ನು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋಗಳು ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿವೆ.
ನಗರದ ಹೃದಯಭಾಗದಲ್ಲಿ, ಅದರಲ್ಲೂ ಪೊಲೀಸರ ಕಣ್ಣೆದುರಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಪುಂಡಾಟಿಕೆಯಿಂದ ಪಾದಚಾರಿಗಳು ಮತ್ತು ಇತರ ವಾಹನ ಸವಾರರಿಗೆ ಪ್ರಾಣಭಯ ಉಂಟಾಗುತ್ತಿದೆ. ಎಂದು ಸ್ಥಳೀಯರು ದೂರಿದ್ದಾರೆ. ಕೂಡಲೇ ಈ ಕಿಡಿಗೇಡಿಗಳನ್ನು ಪತ್ತೆಹಚ್ಚಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರ ವಾಹನಗಳನ್ನು ಜಪ್ತಿ ಮಾಡಬೇಕು ಎಂದು ಸಾರ್ವಜನಿಕರು ಮೈಸೂರು ನಗರ ಪೊಲೀಸರನ್ನು ಆಗ್ರಹಿಸಿದ್ದಾರೆ.
