ಹುಣಸೂರು, ಡಿಸೆಂಬರ್ 29, 2025 : ಮೈಸೂರು ಜಿಲ್ಲೆಯ ಹುಣಸೂರು ನಗರದ ಬಸ್ ನಿಲ್ದಾಣದ ಹಿಂಭಾಗದ ಬೈಪಾಸ್ ರಸ್ತೆಯಲ್ಲಿರುವ ‘ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್’ ಆಭರಣದ ಮಳಿಗೆಯಲ್ಲಿ ಭಾನುವಾರ ಮಧ್ಯಾಹ್ನ ಭೀಕರ ದರೋಡೆ ನಡೆದಿದೆ.
ಮಧ್ಯಾಹ್ನ ಸುಮಾರು 2:00 ರಿಂದ 2:30ರ ಅವಧಿಯಲ್ಲಿ ಎರಡು ಬೈಕ್‌ಗಳಲ್ಲಿ ಬಂದ ಐವರು ದರೋಡೆಕೋರರ ತಂಡವು ಸಿಬ್ಬಂದಿಗೆ ಗನ್ ತೋರಿಸಿ ಬೆದರಿಸಿ, ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿದೆ. ದರೋಡೆಕೋರರ ಪೈಕಿ ಇಬ್ಬರು ಹೆಲ್ಮೆಟ್ ಧರಿಸಿದ್ದರೆ, ಉಳಿದ ಮೂವರು ಶಸ್ತ್ರಸಜ್ಜಿತರಾಗಿ ಅಂಗಡಿಯೊಳಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ದರೋಡೆಕೋರರ ಪತ್ತೆಗಾಗಿ ಐವರು ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಒಟ್ಟು ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ಸದ್ಯ ಜಿಲ್ಲೆಯಾದ್ಯಂತ ಇರುವ 18 ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ. ಎಷ್ಟು ಪ್ರಮಾಣದ ಚಿನ್ನಾಭರಣ ದರೋಡೆಯಾಗಿದೆ ಎಂಬುದು ಅಂಗಡಿಯ ದಾಸ್ತಾನು ಪರಿಶೀಲನೆಯ ನಂತರವಷ್ಟೇ ನಿಖರವಾಗಿ ತಿಳಿಯಲಿದೆ. ಕೇವಲ ಹೊರಗಿನವರು ಮಾತ್ರವಲ್ಲದೆ, ಅಂಗಡಿಯ ಸಿಬ್ಬಂದಿ ಅಥವಾ ಮ್ಯಾನೇಜರ್ ಕೈವಾಡ ಏನಾದರೂ ಇದೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಸ್ಪಷ್ಟಪಡಿಸಿದರು.
ದರೋಡೆಗೆ ಒಳಗಾದ ಮಳಿಗೆಯ ಮಾಲೀಕ ರಷೀದ್ ಮಾತನಾಡಿ, ಮೈಸೂರು ಮತ್ತು ಬೆಂಗಳೂರು ಸೇರಿದಂತೆ ತಮಗೆ ಹತ್ತು ಕಡೆಗಳಲ್ಲಿ ಮಳಿಗೆಗಳಿದ್ದು, ಎಂದೂ ಕೂಡ ಇಂತಹ ಬೆದರಿಕೆ ಕರೆಗಳು ಬಂದಿರಲಿಲ್ಲ ಎಂದು ಹೇಳಿದ್ದಾರೆ. ದರೋಡೆಕೋರರು ಬಂದಿದ್ದ ಬೈಕ್ ಬಗ್ಗೆ ಪೊಲೀಸರಿಗೆ ಈಗಾಗಲೇ ಮಹತ್ವದ ಸುಳಿವು ಲಭ್ಯವಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಮಾಲೀಕರು ಮತ್ತು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ಹುಣಸೂರು ನಗರದ ಜನತೆ ಹಾಗೂ ವ್ಯಾಪಾರಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
