ಮೈಸೂರು, ಡಿಸೆಂಬರ್ 29, 2025: ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇತ್ತೀಚೆಗೆ ಮೈಸೂರು ಅರಮನೆ ಮುಂಭಾಗ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟದ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ಘಟನಾ ಸ್ಥಳದಲ್ಲೇ ಸಿಸಿಟಿವಿ ಕ್ಯಾಮೆರಾ ಇದ್ದರೂ ಸ್ಫೋಟದ ದೃಶ್ಯಗಳು ದಾಖಲಾಗಿಲ್ಲ ಎಂದರೆ ಅರಮನೆಯಲ್ಲಿರುವ ಸಿಸಿಟಿವಿಗಳು ಕೇವಲ ಹೆಸರಿಗಷ್ಟೇ ಇವೆ ಎಂಬುದು ಸಾಬೀತಾಗಿದೆ ಎಂದರು. ಇಂತಹ ಘಟನೆಗಳು ಮೈಸೂರಿನ ಪ್ರವಾಸೋದ್ಯಮಕ್ಕೆ ಧಕ್ಕೆ ತರುತ್ತಿವೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಸಾವಿರಾರು ಕುಟುಂಬಗಳು ಬದುಕುತ್ತಿವೆ. ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಮೌನ ವಹಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೀದಿ ಬದಿ ವ್ಯಾಪಾರಸ್ಥರ ಬದುಕಿಗೂ ರಕ್ಷಣೆ ಬೇಕು, ಅವರಿಗೆ ನಿಗದಿತ ಸ್ಥಳ ಮತ್ತು ವಿಮೆ ಸೌಲಭ್ಯ ಒದಗಿಸಬೇಕು, ಆದರೆ ಜನನಿಬಿಡ ಪ್ರದೇಶಗಳಲ್ಲಿ ಅಪಾಯಕಾರಿ ಹೀಲಿಯಂ ಬಳಕೆ ಮಾಡುವುದನ್ನು ತಡೆಯುವಲ್ಲಿ ಪೊಲೀಸರು ಮತ್ತು ಜಿಲ್ಲಾಡಳಿತ ವಿಫಲವಾಗಿದೆ ಎಂದು ಅವರು ಟೀಕಿಸಿದರು.
ಅಹಿಂದ ಸಮಾವೇಶ ಮತ್ತು ಕಾಂಗ್ರೆಸ್ ಪಕ್ಷದ ಆಂತರಿಕ ಬೆಳವಣಿಗೆಗಳ ಕುರಿತು ವ್ಯಂಗ್ಯವಾಡಿದ ವಿಶ್ವನಾಥ್, ಕಾಂಗ್ರೆಸ್ ಎನ್ನುವುದೇ ಒಂದು ಅಹಿಂದ ಸಂಘಟನೆಯಿದ್ದಂತೆ, ಆದರೆ ಸಿದ್ದರಾಮಯ್ಯ ಅವರು ಪಕ್ಷವನ್ನು ಮುಗಿಸಲು ಹೊರಟಂತಿದೆ ಎಂದು ಆರೋಪಿಸಿದರು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೋ ಅಥವಾ ಬೇರೆ ಎಲ್ಲೋ ಇದ್ದಾರೋ ಎಂಬ ಸಂಶಯ ಕಾಡುತ್ತಿದೆ, ಮೂಲ ಕಾಂಗ್ರೆಸ್ಸಿಗರು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ ಮತ್ತು ಹಣ ಖರ್ಚು ಮಾಡಿದ್ದಾರೆ, ಆದರೆ “ಅಂತು ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ” ಎನ್ನುವಂತೆ ಅವರ ಸ್ಥಿತಿಯಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧವೂ ಕಿಡಿಕಾರಿದ ಅವರು, ಹೈಕಮಾಂಡ್ ನಾಯಕರಿಗೆ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸುವ ಧೈರ್ಯವಿಲ್ಲದಂತಾಗಿದೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಬೀಗ ಹಾಕುವ ಕೆಲಸ ಮಾಡುತ್ತಿದ್ದರೂ ಹಿರಿಯ ನಾಯಕರು ಸುಮ್ಮನಿರುವುದು ಆಶ್ಚರ್ಯಕರವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ತಾನು ಹೈಕಮಾಂಡ್ ಎಂದು ಹೇಳಿಕೊಳ್ಳುವ ಧೈರ್ಯವನ್ನೂ ತೋರುತ್ತಿಲ್ಲ. ಹೀಗೆಯೇ ಮುಂದುವರಿದರೆ ಕಾಂಗ್ರೆಸ್ ಬಾಗಿಲು ಮುಚ್ಚುವುದು ನಿಶ್ಚಿತ ಎಂದು ಎಚ್. ವಿಶ್ವನಾಥ್ ಭವಿಷ್ಯ ನುಡಿದರು.
