ಬೆಂಗಳೂರು, ಡಿಸೆಂಬರ್ 23, 2025 : ಸಾಫ್ಟ್ ವೇರ್ ಉದ್ಯಮಿಗಳ ಫೆವರೇಟ್ ಸಿಟಿ ಬೆಂಗಳೂರು ಇತ್ತೀಚೆಗೆ ಪಲ್ಯೂಷನ್ ಸಿಟಿ ಆಗೋಗ್ತಿದೆ. ದಿನದಿಂದ ದಿನಕ್ಕೆ ಇಲ್ಲಿನ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಭವಿಷ್ಯದಲ್ಲಿ ಜನರು ಇಲ್ಲಿ ವಾಸಿಸೋದೆ ಕಷ್ಟ ಎಂಬಂತಹ ಸ್ಥಿತಿ ನಿರ್ಮಾಣವಾಗಿಬಿಡುತ್ತಾ ಅನ್ನೋ ಅನುಮಾನ ಎದುರಾಗಿದೆ.
ರಾಜಧಾನಿ ಬೆಂಗಳೂರು ಮಾಲಿನ್ಯದಿಂದ ತತ್ತರಿಸಿಹೋಗಿದೆ. ಟ್ರಾಫಿಕ್ ಸಮಸ್ಯೆ,ಕಾಂಕ್ರಿಟೀಕರಣದಿಂದ ಉಸಿರಾಡುವ ಗಾಳಿ ಕಲುಷಿತಗೊಂಡಿದ್ದು, ವಾತಾವರಣ ಹದಗೆಟ್ಟಿದೆ.

ಬೆಂಗಳೂರಿನ ವಾಯು ಗುಣಮಟ್ಟ 170ಕ್ಕೆ ಕುಸಿದಿದ್ದು, ಕಳೆದ ಐದು ವರ್ಷಗಳಲ್ಲಿ 20-25% ಹೆಚ್ಚಳ ಕಂಡಿದೆ. ಇನ್ನು ಸಿಟಿಯಲ್ಲಿ ಪಿಎಂ ಮಟ್ಟವು ಹೆಚ್ಚಾಗಿದ್ದು WHO ಮಿತಿಗಿಂತ 4 ಪಟ್ಟು ಏರಿಕೆಯಾಗಿದೆ ಮುಂಬೈ, ಕೋಲ್ಕತ್ತಾಗೆ ಸವಾಲು ಹಾಕುವ ಮಟ್ಟಕ್ಕೆ ಬೆಂಗಳೂರಿನ ಮಾಲಿನ್ಯ ತಲುಪಿದೆ.
ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನ ಮಾಲಿನ್ಯ ಮಟ್ಟದಲ್ಲಿ ಸರಾಸರಿ 20-25% ಏರಿಕೆ ಕಂಡುಬಂದಿದೆ.ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿ AQI ಮಟ್ಟವು ನಗರದ ಸರಾಸರಿಗಿಂತ 30% ಹೆಚ್ಚು ದಾಖಲಾಗುತ್ತಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗಾಳಿಯ ಗುಣಮಟ್ಟ 150 ದಾಟಿದರೆ ಶ್ವಾಸಕೋಶ ಕಾಯಿಲೆಯ ಜೊತೆಗೆ ಹೃದಯ ಸಂಬಂಧಿ ರೋಗಗಳೂ ಬರುತ್ತೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಉದ್ಯಾನ ನಗರಿ ಬೆಂಗಳೂರು ತನ್ನ ವಾತಾವರಣದಿಂದಲೇ ಜಗತ್ತಿನೆಲ್ಲೆಡೆ ತನ್ನ ಅಪಾರ ಕೀರ್ತಿಯನ್ನು ಹೆಚ್ಚಿಸಿಕೊಂಡಿದೆ. ಆದ್ರೆ ಕಳೆದ 5 ವರ್ಷದಿಂದ ಮಾಲಿನ್ಯ ವಿಪರೀತವಾಗಿ ಗಾಳಿ ಕಲುಷಿತವಾಗುತ್ತಿದೆ ಎಂಬ ಅಂಶ ಬೆಚ್ಚಿಬೀಳಿಸುವಂತಿದ್ದು, ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಹೀಗೆ ಮುಂದುವರಿದರೆ 2035 ರ ವೇಳೆಗೆ ಬೆಂಗಳೂರಿನ AQI ತೀರಾ ಕಳಪೆ ಸ್ಥಿತಿ ತಲುಪಲಿದೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.
