ಮೈಸೂರು, ಡಿಸೆಂಬರ್ 16, 2025 : ಬೀದಿ ನಾಯಿಗಳ ರಕ್ಷಣೆ ಹಾಗೂ ಅವುಗಳ ಹಾವಳಿ ನಿಯಂತ್ರಣದ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ಮತ್ತು ಪಶು ಸಂಗೋಪನಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿನೂತನ ‘ಬೀದಿ ನಾಯಿಗಳ ದತ್ತು ಸ್ವೀಕಾರ’ ಕಾರ್ಯಕ್ರಮವು ಟೌನ್ ಹಾಲ್ ಬಳಿ ಯಶಸ್ವಿಯಾಗಿ ನಡೆಯಿತು. ವಿಶೇಷವೆಂದರೆ, ಈ ಅಭಿಯಾನದಲ್ಲಿ ವಿದೇಶಿ ಪ್ರಜೆಗಳು ಉತ್ಸಾಹದಿಂದ ಭಾಗವಹಿಸಿ ಬೀದಿ ನಾಯಿ ಮರಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಪ್ರಿಯರ ಗಮನ ಸೆಳೆದರು.

ಕಾರ್ಯಕ್ರಮವನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಅವರು ನಾಯಿ ಮರಿಗಳಿಗೆ ತಿನಿಸು ನೀಡುವ ಮೂಲಕ ಉದ್ಘಾಟಿಸಿದರು. ಇಂದು ಸಾಂಕೇತಿಕವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ನಾಯಿಗಳನ್ನು ದತ್ತು ನೀಡಲಾಯಿತು. ಈ ವೇಳೆ ಇಬ್ಬರು ವಿದೇಶಿ ಪ್ರಜೆಗಳು ಎರಡು ನಾಯಿ ಮರಿಗಳನ್ನು ದತ್ತು ಪಡೆದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತ ಶೇಕ್ ತನ್ವೀರ್ ಆಸೀಫ್, ನಗರದಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಲು ದತ್ತು ಸ್ವೀಕಾರ ಪ್ರಕ್ರಿಯೆಯು ಹೆಚ್ಚು ಸಹಕಾರಿಯಾಗಿದೆ ಎಂದರು. “ಸಾವಿರಾರು ರೂಪಾಯಿ ಹಣ ನೀಡಿ ಖರೀದಿಸುವ ವಿದೇಶಿ ತಳಿಯ ನಾಯಿಗಳಿಗಿಂತ ನಮ್ಮ ಸ್ಥಳೀಯ ಬೀದಿ ನಾಯಿಗಳು ಎಲ್ಲಾ ರೀತಿಯಲ್ಲೂ ಉತ್ತಮವಾಗಿವೆ. ಇವುಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿದ್ದು, ಆರೋಗ್ಯ ಸಮಸ್ಯೆಗಳು ಬಾಧಿಸುವುದು ಬಹಳ ಕಡಿಮೆ ಹಾಗೂ ಎಲ್ಲಾ ಹವಾಮಾನದಲ್ಲೂ ಇವು ಆರೋಗ್ಯವಾಗಿರುತ್ತವೆ. ಆದ್ದರಿಂದ ಪ್ರಾಣಿ ಪ್ರಿಯರು ಬೀದಿ ನಾಯಿಗಳನ್ನು ದತ್ತು ತೆಗೆದುಕೊಂಡು ಅವುಗಳಿಗೆ ಆಶ್ರಯ ನೀಡಬೇಕು,” ಎಂದು ಮನವಿ ಮಾಡಿದರು. ಅಲ್ಲದೆ, ನಾಯಿಗಳನ್ನು ಸಾಕಲು ಇಚ್ಛಿಸುವವರಿಗೆ ದತ್ತು ಪಡೆಯಲು ಪಾಲಿಕೆ ವತಿಯಿಂದ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
