ಮಂಡ್ಯ, ಡಿಸೆಂಬರ್ 16, 2025 : ಆದಿ ಜಗದ್ಗುರು ಶಿವರಾತ್ರೀಶ್ವರ ಶ್ರೀಗಳ 1066ನೇ ಜಯಂತಿ ಮಹೋತ್ಸವದ ಅಂಗವಾಗಿ ಇಂದು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಆಗಮಿಸುತ್ತಿದ್ದಾರೆ. ಇದೀಗ ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಆಗಿರೋ ಆರೋಪ ಕೇಳಿಬಂದಿದೆ.

ಈಗಾಗಲೇ ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಪಟ್ಟಣದಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮಕ್ಕಾಗಿ ಜಿಲ್ಲಾಡಳಿತ ವಿತರಿಸಿರುವ ಮಾಧ್ಯಮದ ಗುರುತಿನ ಚೀಟಿ ವಿವಾದಕ್ಕೆ ಗುರಿಯಾಗಿದೆ.
ದೊಂಬಿ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಮತ್ತು ಮಾಜಿ ರೌಡಿ ಶೀಟರ್ ಪಟ್ಟಿಯಲ್ಲಿದ್ದ ಪ್ರಕಾಶ್ ಎಂಬುವವರಿಗೆ ಜಿಲ್ಲಾಡಳಿತ ‘ಮೀಡಿಯಾ ಎಂಟ್ರಿ ಪಾಸ್’ ವಿತರಿಸಿದೆ ಎನ್ನಲಾಗಿದೆ. ರಾಷ್ಟ್ರಪತಿಗಳಂತಹ ಅತ್ಯುನ್ನತ ಭದ್ರತೆಯ ವ್ಯಕ್ತಿಗಳು ಬರುವ ಸ್ಥಳಕ್ಕೆ ಇಂತಹ ಹಿನ್ನೆಲೆಯ ವ್ಯಕ್ತಿಗೆ ಪ್ರವೇಶ ನೀಡುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದ್ದರೂ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ವತಿಯಿಂದಲೇ ಭದ್ರತಾ ಲೋಪ ಎಸಗಿರುವ ಆರೋಪ ಕೇಳಿಬಂದಿದೆ. ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದೆ.
