ಶ್ರೀರಂಗಪಟ್ಟಣ, ಡಿಸೆಂಬರ್ 2, 2025 : ಮೈಸೂರು ಸಮೀಪದ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ನಾಳೆ ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿ, ನಗರದೆಲ್ಲೆಡೆ ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ. ರಾಜ್ಯದ ಹಲವೆಡೆಯಿಂದ ಸಾವಿರಾರು ಹನುಮ ಭಕ್ತರು ಈ ಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಯಾತ್ರೆಯ ಮೆರವಣಿಗೆ ಸಾಗುವ ಗಂಜಾಮ್‌ನ ನಿಮಿಷಾಂಭ ದೇಗುಲದಿಂದ-ರಂಗನಾಥಸ್ವಾಮಿ ದೇಗುಲದ ಮೈದಾನದವರೆಗಿನ ಮಾರ್ಗದುದ್ದಕ್ಕೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ 100ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಎಲ್ಲ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ. ಮೆರವಣಿಗೆ ಸಾಗುವ ಸಂಪೂರ್ಣ ಮಾರ್ಗದುದ್ದಕ್ಕೂ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಈ ಸಂಕೀರ್ತನಾ ಯಾತ್ರೆಯು ಹಲವು ವರ್ಷಗಳಿಂದ ಮುಂದುವರಿದಿರುವ, ಮೂಢಲಬಾಗಿಲು ಆಂಜನೇಯ ದೇಗುಲದ ಪುನರ್ ಪ್ರತಿಷ್ಠಾಪನೆಗಾಗಿ ನಡೆಯುತ್ತಿರುವ ಹೋರಾಟದ ಭಾಗವಾಗಿದೆ. ಟಿಪ್ಪುವಿನ ಆಡಳಿತದ ಅವಧಿಯಲ್ಲಿ ಹನುಮ ದೇವಾಲಯವನ್ನು ಕೆಡವಿ ಆ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂಬುದು ಭಕ್ತರ ಪ್ರಮುಖ ಆರೋಪ. ಇದೇ ಕಾರಣಕ್ಕಾಗಿ ಶ್ರೀರಂಗಪಟ್ಟಣದಲ್ಲಿ ಹನುಮನ ಹೆಸರಿನಲ್ಲಿ ಹೋರಾಟ ನಡೆಯುತ್ತಿದ್ದು, ಇದು ಯಾತ್ರೆಯ ಮುಖ್ಯ ಕಾರಣವಾಗಿದೆ.
ಸಂಕೀರ್ತನಾ ಯಾತ್ರೆಯ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದಾದ್ಯಂತ ಕೇಸರಿ ಬಂಟಿಂಗ್ಸ್, ಭಗವಾಧ್ವಜ ಮತ್ತು ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದು, ನಗರ ಸಂಪೂರ್ಣ ಕೇಸರಿಮಯವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸರು ಎರಡು ಸಮುದಾಯಗಳ ಜನರ ನಡುವೆ ಶಾಂತಿ ಸೌಹಾರ್ಧ ಸಭೆಯನ್ನು ನಡೆಸಿ, ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಅವಕಾಶ ನೀಡದಂತೆ ಮನವಿ ಮಾಡಿದ್ದಾರೆ. ನಾಳೆಯ ಮೆರವಣಿಗೆ ಶಾಂತಿಯುತವಾಗಿ ನಡೆಯಲು ಪೊಲೀಸರು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
ಜಾಮೀಯಾ ಮಸೀದಿ ಬಳಿ ವಿಶೇಷ ಭದ್ರತೆ
ವಿಶೇಷವಾಗಿ, ಶ್ರೀರಂಗಪಟ್ಟಣದಲ್ಲಿರುವ ಟಿಪ್ಪುವಿನ ಜಾಮೀಯಾ ಮಸೀದಿಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಿಗಿ ಭದ್ರತೆ ಒದಗಿಸಲಾಗಿದೆ. ಮಸೀದಿಯ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಿರುವುದರಿಂದ, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಅಲ್ಲದೆ, ಮಸೀದಿ ಬಳಿಯೇ ಡಿಆರ್ (DR) ತುಕಡಿಯನ್ನೂ ಬೀಡುಬಿಡಲಾಗಿದೆ.
