ಮೈಸೂರು, ನವೆಂಬರ್ 25, 2025 : ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇಂದು ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾವುದೇ ಮುನ್ಸೂಚನೆ ನೀಡದೇ ಸಚಿವರು ಠಾಣೆಗೆ ಅನಿರೀಕ್ಷಿತ ಭೇಟಿ ನೀಡಿದ್ದು, ಕೆಲ ಕಾಲ ಪೊಲೀಸ್ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿತ್ತು.

ಠಾಣೆಯ ಆವರಣ ಮತ್ತು ಕಡತಗಳ ಪರಿಶೀಲನೆ ನಡೆಸಿದ ಡಾ. ಪರಮೇಶ್ವರ್ ಅವರು, ಪ್ರಮುಖವಾಗಿ ಪೊಲೀಸ್ ಸಿಬ್ಬಂದಿಗಳ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದರು. ಠಾಣೆಯ ಕಾರ್ಯವೈಖರಿ, ಸಾರ್ವಜನಿಕರ ದೂರುಗಳಿಗೆ ಸ್ಪಂದನೆ ನೀಡುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ದಿಢೀರ್ ಭೇಟಿ ಸಂದರ್ಭದಲ್ಲಿ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ) ವಿಷ್ಣುವರ್ಧನ್, ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಹಾಗೂ ಡಿಸಿಪಿಗಳಾದ ಸುಂದರ್ ರಾಜ್ ಮತ್ತು ಬಿಂದುಮಣಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಸಚಿವರ ಈ ಭೇಟಿಯು ಪೊಲೀಸ್ ಇಲಾಖೆಯಲ್ಲಿನ ಶಿಸ್ತು ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವ ಪಡೆದಿದೆ.
