ದುಬೈ, ನವೆಂಬರ್ 22, 2025 : ದುಬೈ ಏರ್ ಶೋ ವೇಳೆ ಶುಕ್ರವಾರ ಮಧ್ಯಾಹ್ನ ಭಾರತದ ತೇಜಸ್ ಯುದ್ಧ ವಿಮಾನ ಪತನಗೊಂಡಿದೆ.ಅಲ್ ಮಕೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹಾರಾಟ ನಡೆಸುತ್ತಿದ್ದ ವಿಮಾನ ನೋಡನೋಡುತ್ತಿದ್ದಂತೆಯೇ ಬೆಂಕಿಯುಂಡೆಯಾಗಿ ನೆಲಕ್ಕೆ ಅಪ್ಪಳಿಸಿತು. ಸ್ಪೋಟದ ಬಳಿಕ ದಟ್ಟವಾದ ಕಪ್ಪುಹೊಗೆ ಆವರಿಸಿತು. ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (ಎಚ್ ಎಎಲ್) ಅಭಿವೃದ್ಧಿಪಡಿಸಿದ ಏಕ ಆಸನದ ಹಗುರ ಯುದ್ಧವಿಮಾನ (ಎಲ್ ಸಿಎ) ಸ್ಥಳೀಯ ಸಮಯ ಮಧ್ಯಾಹ್ನ 2.10ರ ಸುಮಾರಿಗೆ ಪತನವಾಗಿದೆ.
ವಿಶ್ವದ ಅತಿದೊಡ್ಡ ವಾಯುಯಾನ ಪ್ರದರ್ಶನ ಗಳಲ್ಲಿ ಒಂದಾದ ದೈವಾರ್ಷಿಕ ದುಬೈ ಏರ್ ಶೋ ವೇಳೆ ಈ ಅಪಘಾತ ಸಂಭವಿಸಿದೆ. ಇದು ತೇಜಸ್ ವಿಮಾನದ ಎರಡನೇ ಅಪಘಾತವಾಗಿದೆ. 2024ರ ಮಾರ್ಚ್‌ನಲ್ಲಿ ರಾಜಸ್ಥಾನದ ಜೈಸಲೇರ್‌ನಲ್ಲಿ ತೇಜಸ್ ಯುದ್ಧವಿಮಾನ ಪತನಗೊಂಡಿತ್ತು. ಆ ವೇಳೆ ಪೈಲಟ್ ಸುರಕ್ಷಿತವಾಗಿ ಜಿಗಿಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದರು.
