ಮಂಡ್ಯ, ನವೆಂಬರ್ 21, 2025 : ಪೋಕ್ಸೋ (POCSO) ಪ್ರಕರಣದ ಸಂಕಷ್ಟದಿಂದ ಹೊರಬರಲು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಮನೆ ದೇವರ ಮೊರೆ ಹೋಗಿದ್ದಾರೆ. ಸಂಕಷ್ಟ ನಿವಾರಣೆಗಾಗಿ ಅವರು ತಮ್ಮ ಹುಟ್ಟೂರು ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಬೂಕನಕೆರೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬೂಕನಕೆರೆಗೆ ಆಗಮಿಸಿದ ಬಿ.ಎಸ್. ಯಡಿಯೂರಪ್ಪ ಅವರು ಮೊದಲು ಗೋಗುಲಮ್ಮ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ತವರಿನ ಕಾರ್ಯಕರ್ತರು ಮತ್ತು ಅಭಿಮಾನಿಗಳು ಮಾಜಿ ಸಿಎಂಗೆ ಅದ್ದೂರಿ ಸ್ವಾಗತ ಕೋರಿದರು. ಗೋಗುಲಮ್ಮ ದೇವಿಯ ದರ್ಶನದ ಬಳಿಕ ಬಿಎಸ್‌ವೈ ಅವರು ತಮ್ಮ ಮನೆ ದೇವರಾದ ಸ್ವತಂತ್ರ ಸಿದ್ಧಲಿಂಗೇಶ್ವರ ಸ್ವಾಮಿಯ ದರ್ಶನಕ್ಕೆ ತೆರಳಿದರು.
ಪೋಕ್ಸೋ ಕಾಯ್ದೆಯಡಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧಿಸಿದಂತೆ ಕಾನೂನು ಹೋರಾಟದಲ್ಲಿ ಯಶಸ್ಸು ಹಾಗೂ ಸಂಕಷ್ಟ ನಿವಾರಣೆಗಾಗಿ ಮನೆ ದೇವರ ಆಶೀರ್ವಾದ ಪಡೆಯುವುದಕ್ಕಾಗಿ ಮಂಡ್ಯ ಜಿಲ್ಲೆ, ಕೆ.ಆರ್. ಪೇಟೆ ತಾಲ್ಲೂಕು, ಬೂಕನಕೆರೆಗೆ ತೆರಳಿದ್ದಾರೆ.
