ಮೈಸೂರು, ನವೆಂಬರ್ 19, 2025 : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊಫೆಸರ್ ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನ ಕಲಾವಿದರ ಕುರಿತು ನೀಡಿರುವ ಹೇಳಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ಮೈಸೂರಿನ ಮಾನಸಗಂಗೋತ್ರಿಯ ಪ್ರಸಾರಾಂಗದಲ್ಲಿ ನಡೆದ ‘ಧರೆಗೆ ದೊಡ್ಡವರು ಕಾವ್ಯದ ಏಳು ಪಠ್ಯಗಳು’ ಹಾಗೂ ‘ನಾವು ಕೂಗುವ ಕೂಗು’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು. ಅಲ್ಲಿ ಅಂತಹ ಅನಿವಾರ್ಯತೆ ಇದೆ. ಸತ್ಯವನ್ನು ಹೇಳಲು ಹಿಂಜರಿಯಬಾರದು. ಕಲಾವಿದರು ಮೇಳಕ್ಕೆಂದು ಆರೆಂಟು ತಿಂಗಳು ತಿರುಗಾಟದಲ್ಲೇ ಇರುತ್ತಾರೆ, ಆದ್ದರಿಂದ, ಅವರಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಅಲ್ಲಿನ ಸ್ತ್ರೀ ವೇಷಧಾರಿಗಳೂ ಒತ್ತಡದಲ್ಲಿರುತ್ತಿದ್ದರು. ಅವರ ಮೇಲೆ ಇತರರಿಗೆ ಮೋಹವೇ ಇರುತ್ತಿತ್ತು. ಸ್ತ್ರೀ ವೇಷದ ಕಲಾವಿದ ಏನಾದರೂ ಸಲಿಂಗಕಾಮ ನಿರಾಕರಿಸಿದ್ದರೆ, ಭಾಗವತರು ಮರು ದಿವಸ ಅವರಿಗೆ ಪದ್ಯವನ್ನೇ ಕೊಡುತ್ತಿರಲಿಲ್ಲ. ರಂಗಭೂಮಿಯ ಮೇಲೆ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲಾಗುತ್ತಿತ್ತು. ಮೇಳದಲ್ಲಿ ಅವಕಾಶ ಇಲ್ಲದೇ ಹೋದರೆ ಬದುಕೇ ಇಲ್ಲವೆಂಬ ಒತ್ತಡದಲ್ಲಿ ಕಲಾವಿದರು ಇರುತ್ತಿದ್ದರು.ಆಗೆಲ್ಲ ಕಲಾವಿದ ಮೇಳಕ್ಕೆಂದು ಹೋಗಿ ವಾಪಸ್ಸಾದಾಗ ಹಲವರಿಗೆ ಮನೆಯೇ ಇರುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಪ್ರೊಫೆಸರ್ ಪುರುಷೋತ್ತಮ ಬಿಳಿಮಲೆ ಅವರ ಈ ಹೇಳಿಕೆಗಳು ಯಕ್ಷಗಾನ ಕಲಾವಿದರ ಜೀವನಶೈಲಿ ಮತ್ತು ಇತಿಹಾಸದ ಕುರಿತು ಗಂಭೀರ ಚರ್ಚೆಗೆ ನಾಂದಿ ಹಾಡಿವೆ. ಸಾಂಸ್ಕೃತಿಕ ವಲಯದಲ್ಲಿ ಈ ಹೇಳಿಕೆಗಳು ಪರ-ವಿರೋಧ ಅಭಿಪ್ರಾಯಗಳನ್ನು ಹುಟ್ಟುಹಾಕುವ ಸಾಧ್ಯತೆ ಇದೆ.
