ಸರಗೂರು, ನವೆಂಬರ್ 18, 2025 : ಮೈಸೂರು ಜಿಲ್ಲೆ ಸರಗೂರು ತಾಲೂಕಿನ ನಿವಾಸಿಗಳಿಗೆ ಉಪಟಳ ನೀಡುತ್ತಿದ್ದ ಮತ್ತೊಂದು ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಸರಗೂರು ತಾಲೂಕಿನ ಹೊಸ ಬೀರವಾಳು ಗ್ರಾಮದ ಬಳಿ ನುಗು ವನ್ಯಜೀವಿ ವಲಯದಲ್ಲಿ ಹುಲಿ ಸೆರೆಯಾಗಿದೆ. ಸೆರೆಯಾದ ಹುಲಿ ಸುಮಾರು 6 ರಿಂದ 7 ವರ್ಷದ ತಾಯಿ ಹುಲಿ ಎಂದು ಅಂದಾಜಿಸಲಾಗಿದೆ.ಈ ತಾಯಿ ಹುಲಿಯೊಂದಿಗೆ ಇದ್ದ ಮೂರು ಪುಟ್ಟ ಹುಲಿ ಮರಿಗಳನ್ನು ಸಹ ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ರಾತ್ರಿ ವೇಳೆ ಎರಡು ಹುಲಿ ಮರಿಗಳನ್ನು ರಕ್ಷಿಸಲಾಗಿತ್ತು ಮತ್ತು ಇಂದು (ಮಂಗಳವಾರ) ಬೆಳಿಗ್ಗೆ ಮತ್ತೊಂದು ಮರಿಯನ್ನು ರಕ್ಷಿಸಲಾಗಿದೆ.
ಅರಣ್ಯ ಇಲಾಖೆಯು ಈ ಕಾರ್ಯಾಚರಣೆಗೆ ಸುಸಜ್ಜಿತ ತಂಡವನ್ನು ನಿಯೋಜಿಸಿತ್ತು.ಅರಣ್ಯ ಇಲಾಖೆ ಸಿಬ್ಬಂದಿ ಡ್ರೋಣ್ ಕ್ಯಾಮೆರಾ ಬಳಸಿಕೊಂಡು ಹುಲಿಯ ಚಲನವಲನಗಳನ್ನು ನಿಖರವಾಗಿ ಪತ್ತೆ ಹಚ್ಚಿದರು. ಪತ್ತೆ ಹಚ್ಚಿದ ನಂತರ, ತಾಯಿ ಹುಲಿಗೆ ಅರವಳಿಕೆ ಚುಚ್ಚುಮದ್ದು (Tranquilizer) ನೀಡಿ ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು. ಈ ಯಶಸ್ವಿ ಕಾರ್ಯಾಚರಣೆಯಲ್ಲಿ 40ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.
ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಹುಲಿ ಮತ್ತು ಅದರ ಮರಿಗಳನ್ನು ಸೆರೆ ಹಿಡಿದಿರುವುದರಿಂದ, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
