ಮೈಸೂರು, ನವೆಂಬರ್ 17, 2025 : ಮೈಸೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬರಿಗೆ ಅದೇ ಕಾಲೇಜಿನ ಉಪನ್ಯಾಸಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿಯ ದೂರಿನ ಮೇರೆಗೆ ಉಪನ್ಯಾಸಕನ ವಿರುದ್ಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಭರತ್ ಭಾರ್ಗವ ಆರೋಪಿ ಉಪನ್ಯಾಸಕನಾಗಿದ್ದು, ಮೈಸೂರಿನ ಪ್ರತಿಷ್ಠಿತ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಉಪನ್ಯಾಸಕನ ವಿರುದ್ಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ BNS ಸೆಕ್ಷನ್ 126 (2), 75 (2), ಮತ್ತು 351 (2) ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ವಿದ್ಯಾರ್ಥಿನಿಯು ತಮ್ಮ ದೂರಿನಲ್ಲಿ ಉಪನ್ಯಾಸಕ ಭರತ್ ಭಾರ್ಗವ ಅವರು ಪ್ರತಿದಿನವೂ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.ಅಲ್ಲದೆ ಉತ್ತಮ ಅಂಕಗಳನ್ನು ನೀಡುತ್ತೇನೆ ಮತ್ತು ಒಳ್ಳೆಯ ಕೆಲಸ ಕೊಡಿಸುವುದಾಗಿ ವಿದ್ಯಾರ್ಥಿನಿಗೆ ಆಮಿಷವೊಡ್ಡಿ, ಹೊರಗಡೆ ಪಬ್‌ಗೆ ಹೋಗಿ ಮಜಾ ಮಾಡೋಣ ಬಾ ಎಂದು ವಿದ್ಯಾರ್ಥಿನಿಯನ್ನು ಪೀಡಿಸುತ್ತಿದ್ದ, ಹಾಗೂ ವಿದ್ಯಾರ್ಥಿನಿಯ ಖಾಸಗಿ ಅಂಗಾಂಗಳ ಬಗ್ಗೆ ಉಪನ್ಯಾಸಕ ಭರತ್ ಭಾರ್ಗವ ಕೆಟ್ಟದಾಗಿ ಮಾತನಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತಾನು ಹೇಳಿದಂತೆ ಕೇಳದಿದ್ದರೆ ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಉಪನ್ಯಾಸಕನ ನಿರಂತರ ಕಿರುಕುಳದಿಂದ ಬೇಸತ್ತಿದ್ದ ವಿದ್ಯಾರ್ಥಿನಿಯು ಈ ಬಗ್ಗೆ ಕಾಲೇಜಿನ ಮಹಿಳಾ ಉಪನ್ಯಾಸಕರಿಗೆ ದೂರು ನೀಡಿದ್ದರು. ಈ ವಿಚಾರ ತಿಳಿದ ಆರೋಪಿ ಉಪನ್ಯಾಸಕ ಭರತ್ ಭಾರ್ಗವ ಅವರು, ವಿದ್ಯಾರ್ಥಿನಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಪ್ರಸ್ತುತ, ವಿದ್ಯಾರ್ಥಿನಿಯ ಮನವಿಯ ಮೇರೆಗೆ ಉಪನ್ಯಾಸಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಜಯಲಕ್ಷ್ಮಿಪುರಂ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
