ಮೈಸೂರು, ನವೆಂಬರ್ 7, 2025 : ಕೇಂದ್ರ ಸಚಿವ ಕುಮಾರಸ್ವಾಮಿ ದಂಪತಿ ದಕ್ಷಿಣಕಾಶಿ ನಂಜನಗೂಡಿಗೆ ಹಾಗೂ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

ಪತ್ನಿ ಅನಿತಾ ಜೊತೆಯಲ್ಲಿ ಮೊದಲಿಗೆ ನಂಜನಗೂಡಿಗೆ ಭೇಟಿ ನೀಡಿದ ಸಚಿವರು, ಶ್ರೀಕಂಠೇಶ್ವರ ಸ್ವಾಮಿಯ ದರ್ಶನ ಪಡೆದರು. ನಂತರ ಬೆಲ್ಲದ ತುಲಾಭಾರ ಮಾಡಿಸಿಕೊಂಡು ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ಹರಕೆ ತೀರಿಸಿದ್ದಾರೆ. ಪತಿಯ ಆರೋಗ್ಯ ಚೇತರಿಕೆಗಾಗಿ ಶ್ರೀಕಂಠೇಶ್ವರನಿಗೆ ಪತ್ನಿ ಅನಿತಾ ಹರಕೆ ಕಟ್ಟಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ದಂಪತಿ ಸಮೇತರಾಗಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ತುಲಾಭಾರ ಹರಕೆ ತೀರಿಸಿದ್ದಾರೆ.
ಚಾಮುಂಡಿಬೆಟ್ಟಕ್ಕೆ ಭೇಟಿ :
ನಂಜನಗೂಡಿಗೆ ಭೇಟಿ ನೀಡಿದ ನಂತರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ದಂಪತಿ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ. ಗರ್ಭಗುಡಿಯಲ್ಲಿ ನಿಂತು ವಿಶೇಷ ಪ್ರಾರ್ಥನೆ ಸಲ್ಲಿಸಿದ ದಂಪತಿ, ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಂಡಿದ್ದಾರೆ. ಈ ವೇಳೆ ಕೇಂದ್ರ ಸಚಿವರಿಗೆ ಜೆಡಿಎಸ್ ಸ್ಥಳೀಯ ನಾಯಕರು ಸಾಥ್ ನೀಡಿದ್ದಾರೆ.
