ನಂಜನಗೂಡು , ನವೆಂಬರ್ 6, 2025 : ನಂಜನಗೂಡು ತಾಲ್ಲೂಕಿನ ಹೊಸವೀಡು ಗ್ರಾಮದ ಹೊರವಲಯದಲ್ಲಿ ಸುಮಾರು ಒಂದೂವರೆ ವರ್ಷದ ಮರಿ ಹುಲಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಈ ಮೂಲಕ ವಾರಗಳ ಕಾಲ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಹುಲಿಗಳ ಹಾವಳಿಗೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.

ಕಳೆದ ಕೆಲವು ವಾರಗಳಿಂದ ಈರೇಗೌಡನಹುಂಡಿ ಸುತ್ತಮುತ್ತ ತಾಯಿ ಹುಲಿಯು ಎರಡು ಮರಿಗಳ ಜೊತೆ ಕಾಣಿಸಿಕೊಳ್ಳುತ್ತಿತ್ತು.ಸುಮಾರು ಒಂದು ವಾರದ ಹಿಂದೆ ಅರಣ್ಯ ಇಲಾಖೆಯು ತಾಯಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.ಇದೀಗ, ತಾಯಿಯಿಂದ ಬೇರ್ಪಟ್ಟಿದ್ದ ಮತ್ತೊಂದು ಮರಿ ಹುಲಿಯು ಹೊಸವೀಡು ಗ್ರಾಮದ ಹೊರವಲಯದಲ್ಲಿ, ಗ್ರಾಮದ ಸೋಮೇಶ್ ಎಂಬುವರ ಜಮೀನಿನಲ್ಲಿ ಪತ್ತೆಯಾಗಿತ್ತು.
ಹುಲಿಯ ಹಾವಳಿಯಿಂದ ಭಯಭೀತರಾಗಿದ್ದ ಗ್ರಾಮಸ್ಥರ ಮನವಿಯ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದರು.ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಸೆರೆ ಹಿಡಿದಿದ್ದಾರೆ. ಸಾಕಾನೆಗಳಾದ ಭೀಮ, ಪ್ರಶಾಂತ, ಶ್ರೀಕಂಠ ಹಾಗೂ ಲಕ್ಷ್ಮಣ ಆನೆಗಳ ಸಹಾಯದಿಂದ ಮರಿ ಹುಲಿಯನ್ನು ಯಶಸ್ವಿಯಾಗಿ ಬಲೆಗೆ ಬೀಳಿಸಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಯನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಿಎಫ್ ಪ್ರಭಾಕರನ್, ಹೆಡಿಯಾಲ ಎಸಿಎಫ್ ಪರಮೇಶ್, ಮತ್ತು ಆರ್‌ಎಫ್ಒ ವಿವೇಕ್ ಅವರ ನೇತೃತ್ವದಲ್ಲಿ ನಡೆಸಲಾಗಿದೆ.
ಸೆರೆಯಾದ ಮರಿ ಹುಲಿಯನ್ನು ಹೆಚ್ಚಿನ ಆರೈಕೆಗಾಗಿ ಮೈಸೂರಿನ ಕೂರ್ಗಳ್ಳಿ ಸಮೀಪದ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ರವಾನಿಸಲಾಗಿದೆ. ಸತತವಾಗಿ ಹುಲಿಗಳ ಹಾವಳಿಯಿಂದ ಆತಂಕಕ್ಕೆ ಒಳಗಾಗಿದ್ದ ಹೊಸವೀಡು ಗ್ರಾಮಸ್ಥರು, ಇದೀಗ ಮರಿ ಹುಲಿಯ ಸೆರೆಯಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ.
