ಮೈಸೂರು, ಜನವರಿ 12, 2026 : ಸುತ್ತೂರು ಶ್ರೀ ಕ್ಷೇತ್ರದ ಈ ಬಾರಿಯ ಜಾತ್ರಾ ಮಹೋತ್ಸವವು ಅತ್ಯಂತ ಸಂಭ್ರಮದಿಂದ ಜರುಗಲು ಸಿದ್ಧವಾಗಿದೆ. ಸಾವಿರ ವರ್ಷಗಳ ಭವ್ಯ ಇತಿಹಾಸವಿರುವ ಈ ಪುಣ್ಯಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಸ್ಮರಣಾರ್ಥವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಜನವರಿ 15 ರಿಂದ 20 ರವರೆಗೆ ಒಟ್ಟು ಆರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರಸಕ್ತ ಮಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಈ ಸಕಲ ಕಾರ್ಯಕ್ರಮಗಳು ನೆರವೇರಲಿವೆ. ಜಾತ್ರೆಯ ಪ್ರಮುಖ ಧಾರ್ಮಿಕ ವಿಧಿವಿಧಾನಗಳಾಗಿ ಜನವರಿ 16 ರಂದು ಸಾವಿರಾರು ಜೋಡಿಗಳ ಸಾಮೂಹಿಕ ವಿವಾಹ ಮತ್ತು ಹಾಲರವಿ ಉತ್ಸವ ನಡೆಯಲಿದೆ. ಜನವರಿ 17 ರಂದು ಭಕ್ತಸಾಗರದ ನಡುವೆ ಅದ್ಧೂರಿ ರಥೋತ್ಸವ ಹಾಗೂ ವೀರಭದ್ರೇಶ್ವರ ಸ್ವಾಮಿಯ ಕೊಂಡೋತ್ಸವ ಜರುಗಲಿದ್ದು, 18 ರಂದು ಮಹದೇಶ್ವರ ಕೊಂಡೋತ್ಸವ ಹಾಗೂ ಕಣ್ಮನ ಸೆಳೆಯುವ ಲಕ್ಷ ದೀಪೋತ್ಸವ ಏರ್ಪಾಡಾಗಿದೆ. 19 ರಂದು ಕಪಿಲಾ ನದಿಯ ಶಾಂತ ಲಹರಿಯಲ್ಲಿ ತೆಪ್ಪೋತ್ಸವ ಹಾಗೂ ಕೊನೆಯ ದಿನವಾದ 20 ರಂದು ಅನ್ನ ಬ್ರಹ್ಮೋತ್ಸವದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.
ಧಾರ್ಮಿಕ ವಿಧಿಗಳ ಜೊತೆಗೆ ಜನಪದ ಮತ್ತು ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ರಂಗೋಲಿ, ಸೋಬಾನೆ ಪದ, ರಾಗಿ ಬೀಸುವ ಸ್ಪರ್ಧೆ, ಭಜನಾ ಮೇಳ, ಕುಸ್ತಿ ಪಂದ್ಯಾವಳಿ ಹಾಗೂ ಗಾಳಿಪಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ಕ್ಷೇತ್ರದಲ್ಲಿ ಆಸಕ್ತಿಯುಳ್ಳವರಿಗಾಗಿ ಬೃಹತ್ ವಸ್ತು ಪ್ರದರ್ಶನ, 55ನೇ ದನಗಳ ಪರಿಶೆ ಮತ್ತು ಕೃಷಿ ವಿಚಾರ ಸಂಕಿರಣಗಳು ನಡೆಯಲಿವೆ. ಸಾಂಸ್ಕೃತಿಕ ಲೋಕದ ಭಾಗವಾಗಿ ಕಲಾವೈಭವ, ಕಲಾತಂಡಗಳ ಪ್ರದರ್ಶನ ಹಾಗೂ ಮನರಂಜನೆಗಾಗಿ ದೋಣಿವಿಹಾರ ಮತ್ತು ಮಲ್ಲಕಂಬ ಪ್ರದರ್ಶನಗಳು ಪ್ರಮುಖ ಆಕರ್ಷಣೆಗಳಾಗಿವೆ.
ಲಕ್ಷಾಂತರ ಭಕ್ತರ ಹಸಿವು ನೀಗಿಸಲು ಮಠವು ಬೃಹತ್ ದಾಸೋಹ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, 150ಕ್ಕೂ ಹೆಚ್ಚು ನುರಿತ ಅಡುಗೆ ಭಟ್ಟರು ಅಹೋರಾತ್ರಿ ಕಾರ್ಯನಿರ್ವಹಿಸಲಿದ್ದಾರೆ. ಇದಕ್ಕಾಗಿ ಸಾವಿರ ಕ್ವಿಂಟಾಲ್ ಅಕ್ಕಿ, ನೂರಾರು ಕ್ವಿಂಟಾಲ್ ಬೇಳೆ, ಸಕ್ಕರೆ, ಬೆಲ್ಲ ಹಾಗೂ ಸಾವಿರಾರು ಲೀಟರ್ ಹಾಲು-ಮೊಸರನ್ನು ಸಂಗ್ರಹಿಸಲಾಗಿದೆ. ಪ್ರಸಾದ ವಿತರಣೆಯು ದಿನದ 24 ಗಂಟೆಯೂ ಸುಗಮವಾಗಿ ನಡೆಯಲು ಬ್ಯಾರೀಕೆಡ್ ವ್ಯವಸ್ಥೆ ಮಾಡಲಾಗಿದ್ದು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸರ್ವ ಸಿದ್ಧತೆಗಳನ್ನು ಪೂರೈಸಲಾಗಿದೆ ಎಂದು ಜಾತ್ರಾ ಸಮಿತಿಯ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಪ್ರಮುಖರಾದ ಮಂಜುನಾಥ್, ಸುಬ್ಬಪ್ಪ, ಶಿವಕುಮಾರ್, ಉದಯಶಂಕರ್ ಹಾಜರಿದ್ದರು.
