ಬೆಂಗಳೂರು : ಮಾರ್ಚ್ 25ರಿಂದ ಏಪ್ರಿಲ್ 6ರ ವರೆಗೆ ನಡೆಯಲಿರುವ 2023-24 ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ- 1ಕ್ಕೆ ರಾಜ್ಯಾದ್ಯಂತ ಒಟ್ಟು 8,69,968 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅದರದಲ್ಲಿ 4,41,910 ಬಾಲಕರಾದರೆ, 4,28,058 ಬಾಲಕಿಯರು. ಒಟ್ಟು ವಿದ್ಯಾರ್ಥಿಗಳ ನೋಂದಣಿಯಲ್ಲಿ 8,10,368 ಶಾಲಾ ವಿದ್ಯಾರ್ಥಿಗಳು, 18,225 ಖಾಸಗಿ ವಿದ್ಯಾರ್ಥಿಗಳು ಹಾಗೂ 41,375 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. 5,424 ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆಯುತ್ತಿದ್ದಾರೆ. ಒಟ್ಟು 2750 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಮಂಡಳಿಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಅಧಿಕಾರಿ, ಸಿಬ್ಬಂದಿ ಹಾಗೂ ಪರೀಕ್ಷಾರ್ಥಿಗಳಿಗೆ ಕಡ್ಡಾಯವಾಗಿ ಮೊಬೈಲ್ ಫೋನ್ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ 200ಮೀ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡುವುದು. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಪೊಲೀಸ್ ಭದ್ರತೆಯನ್ನು ಒದಗಿಸಲು ಸಜ್ಜು ಮಾಡಿಕೊಳ್ಳಲಾಗಿದೆ.