ಮೈಸೂರು , ನವೆಂಬರ್ 3, 2025: ನಂಜನಗೂಡು, ತಿ ನರಸೀಪುರ, ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಪ್ರವಾಹದಿಂದ ನದಿ ದಂಡೆಯ ಬದಿಯಲ್ಲಿರುವ ಗ್ರಾಮಗಳಿಗೆ ನೀರು ನುಗ್ಗುತ್ತಿದೆ. ಹೀಗಾಗಿ ದಂಡೆಯುದ್ದಕ್ಕೂ ತಡೆಗೋಡೆ ನಿರ್ಮಿಸಲು 500 ಕೋಟಿ ವಿಶೇಷ ಆರ್ಥಿಕ ನೆರವು ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ವಿಧಾನಪರಿಷತ್ ಸದಸ್ಯ ಶಿವಕುಮಾರ್ ತಿಳಿಸಿದರು.

ಮೈಸೂರಿನಲ್ಲಿಂದು ಮಾತನಾಡಿದ ಅವರು, ನಂಜನಗೂಡು, ತಿ ನರಸೀಪುರ, ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಪ್ರವಾಹದಿಂದ ನದಿ ದಂಡೆಯ ಬದಿಯಲ್ಲಿರುವ ಗ್ರಾಮಗಳಿಗೆ ನೀರು ನುಗ್ಗುತ್ತಿದೆ.ದಂಡೆಯುದ್ದಕ್ಕೂ ತಡೆಗೋಡೆ ನಿರ್ಮಿಸಲು 500 ಕೋಟಿ ವಿಶೇಷ ಆರ್ಥಿಕ ನೆರವು ಕಲ್ಪಿಸಬೇಕು. ಆಸ್ತಿಪಾಸ್ತಿ ಹಾನಿಯಿಂದ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ನಂಜನಗೂಡು ಹಾಗೂ ತಿ ನರಸೀಪುರದಲ್ಲಿ 2.5 ಕಿ.ಮೀ. ನಿಂದ 3.5 ಕಿ.ಮೀವರೆಗೆ, ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ 6 ರಿಂದ 8 ಕಿ ಮೀ ಉದ್ದಕ್ಕೂ ನದಿಯ ಎರಡೂ ದಂಡೆಗಳಲ್ಲಿ ತಡೆಗೋಡೆ ನಿರ್ಮಿಸಬೇಕಿದೆ. ದಶಕಗಳಿಂದಲೂ ಈ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ಜನರು ಹೈರಾಣಾಗಿದ್ದಾರೆ. ಈ ತಡೆಗೋಡೆ ನಿರ್ಮಾಣ ಮಾಡಿದರೆ ಪ್ರವಾಹದಿಂದ ತೊಂದರೆಗೆ ಸಿಲುಕುವ ಜನರಿಗೆ ಶಾಶ್ವತವಾದ ಪರಿಹಾರ ಕಲ್ಪಿಸಿದಂತಾಗುತ್ತದೆ. ಹೀಗಾಗಿ ನಿರ್ಮಾಣಕ್ಕೆ 500 ಕೋಟಿಗೆ ಬೇಡಿಕೆ ಇಟ್ಟು ಕೇಂದ್ರ ಸರ್ಕಾರದ 16ನೇ ಹಣಕಾಸು ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಅಡಿಯಲ್ಲಿ ಅನುದಾನ ಒದಗಿಸಬೇಕೆಂದು ಒತ್ತಾಯ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ನವೆಂಬರ್ ನಲ್ಲಿ ಕ್ರಾಂತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನವೆಂಬರ್ ಡಿಸೆಂಬರ್ ಕ್ರಾಂತಿ ಆಗುವುದಿಲ್ಲ, ಸಂಕ್ರಾತಿ ಬರುತ್ತದೆ.ಎಲ್ಲರಿಗೂ ಒಳ್ಳೆಯದಾಗುತ್ತದೆ.ಒಳ್ಳೆಯ ಮಳೆ ಬೆಳೆಯಾಗಿ ಸರ್ಕಾರ ಇನ್ನಷ್ಟು ಉತ್ತಮ ಕೆಲಸ ಮಾಡುತ್ತದೆ. ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲ ಇದೆ. ಹೀಗಾಗಿ 5 ವರ್ಷ ಸಿಎಂ ಆಗಿರುತ್ತಾರೆ ಅಂದುಕೊಂಡಿದ್ದೇನೆ. ಈ ವಿಚಾರದ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ.
ಶಾಸಕರ ಬೆಂಬಲ ಇಲ್ಲದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕೆ ಶಿವಕುಮಾರ್ ಮೈಸೂರಿನಲ್ಲಿ ಹೇಳಿಕೆ ನೀಡಿದರು.
