ಮೈಸೂರು, ಫೆಬ್ರವರಿ 28, 2026 : ಇಂದಿನಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದು, ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಆತ್ಮಸ್ಥೈರ್ಯ ತುಂಬುವ ಮೂಲಕ ಶುಭ ಹಾರೈಸಿದರು.
ನಗರದ ರಮಾ ವಿಲಾಸ ರಸ್ತೆಯಲ್ಲಿರುವ ಮರಿಮಲ್ಲಪ್ಪ ಕಾಲೇಜು ಹಾಗೂ ನಾರಾಯಣ ಶಾಸ್ತ್ರಿ ರಸ್ತೆಯ ಮಹಾರಾಣಿ ಸರ್ಕಾರಿ ಪ್ರೌಢಶಾಲಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಯುವಕರು ಮತ್ತು ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಹೂವು ನೀಡಿ ಹಾರೈಸಿದರು.ಈ ಬಾರಿ ಮೈಸೂರು ಜಿಲ್ಲೆಗೆ ಉನ್ನತ ಫಲಿತಾಂಶ ಬರಲಿ ಎಂದು ಹಾರೈಸಿದ ನಾಗರಿಕರು, ಯಾವುದೇ ಆತಂಕವಿಲ್ಲದೆ ಪರೀಕ್ಷೆ ಎದುರಿಸುವಂತೆ ವಿದ್ಯಾರ್ಥಿಗಳಿಗೆ ಅಭಯ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಹಿತರಕ್ಷಣಾ ವೇದಿಕೆಯ ವಿನಯ್ ಕುಮಾರ್ ಅವರು, ವಿದ್ಯಾರ್ಥಿಗಳು ಪರೀಕ್ಷೆಯನ್ನು ಒಂದು ಸಂಭ್ರಮದಂತೆ ಸ್ವೀಕರಿಸಬೇಕು ಎಂದು ಕರೆ ನೀಡಿದರು. ಪರೀಕ್ಷೆಯನ್ನು ಶತ್ರು ಅಥವಾ ಭೂತ ಎಂದು ಪರಿಗಣಿಸಿದರೆ ವರ್ಷವಿಡೀ ಕಲಿತ ಪಾಠಗಳು ಮರೆತುಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕು. ವಿದ್ಯಾರ್ಥಿಗಳಲ್ಲಿ ಕೀಳರಿಮೆ ಮೂಡದಂತೆ ಪೋಷಕರು ಆತ್ಮಸ್ಥೈರ್ಯ ತುಂಬಬೇಕು ಎಂದು ಅವರು ತಿಳಿಸಿದರು. ದೊಡ್ಡ ಸಂಶೋಧನೆಗಳು ಹುಟ್ಟಿದ್ದೇ ಪ್ರಶ್ನೆಗಳಿಂದ ಎಂಬ ಅರಿವು ವಿದ್ಯಾರ್ಥಿಗಳಲ್ಲಿ ಇರಲಿ, ಮೊದಲು ಪರೀಕ್ಷೆಯ ಭಯ ಮತ್ತು ಒತ್ತಡದಿಂದ ಹೊರಬನ್ನಿ ಎಂದು ಅವರು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಮುಖಂಡರಾದ ನಜರ್ಬಾದ್ ನಟರಾಜ್, ವಿಕ್ರಂ ಅಯ್ಯಂಗಾರ್, ಎಸ್.ಎನ್. ರಾಜೇಶ್, ಗುರುರಾಜ್ ಶೆಟ್ಟಿ, ನೀತು, ಉಮೇಶ್ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದು ವಿದ್ಯಾರ್ಥಿಗಳ ಯಶಸ್ಸಿಗೆ ಹಾರೈಸಿದರು.
