ಪಿರಿಯಾಪಟ್ಟಣ, ನವೆಂಬರ್ 3, 2025 : ಶಾಲಾ ವಿದ್ಯಾರ್ಥಿನಿಯ ಗರ್ಭಧಾರಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಮನನೊಂದ ಯುವಕನೊಬ್ಬ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ. ಯುವಕನ ಸಾವಿಗೆ ಶಾಲೆಯ ದೈಹಿಕ ಶಿಕ್ಷಕನೇ ಕಾರಣ ಎಂದು ಆರೋಪಿಸಿರುವ ವಾಯ್ಸ್ ನೋಟ್ ಒಂದನ್ನು ಆತ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಹೋಗಿದ್ದಾನೆ.

ಪಿರಿಯಾಪಟ್ಟಣ ತಾಲೂಕಿನ ಕುಡಕೂರು ಗ್ರಾಮದ ನಿವಾಸಿ ರಾಮು (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಪಿರಿಯಾಪಟ್ಟಣ ತಾಲೂಕಿನ ಶಾಲೆಯೊಂದರ ಅಪ್ರಾಪ್ತ ವಿದ್ಯಾರ್ಥಿನಿಯು ಗರ್ಭಿಣಿ ಎಂಬುದು ವೈದ್ಯಕೀಯ ಪರೀಕ್ಷೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಾಲೆಯ ದೈಹಿಕ ಶಿಕ್ಷಕನೊಂದಿಗೆ ವಿದ್ಯಾರ್ಥಿನಿಗೆ ದೈಹಿಕ ಸಂಬಂಧವಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಯುವತಿ ರಾಮು ಅವರೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದರೆಂಬ ಕಾರಣಕ್ಕೆ, ರಾಮು ಅವರ ಮೇಲೆ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಹೊರಿಸಲಾಗಿದೆ ಎನ್ನಲಾಗಿದೆ.
ನನಗೂ ಆಕೆಗೂ ಯಾವುದೇ ಸಂಬಂಧ ಇಲ್ಲ, ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ನನಗೆ ತಲೆ ಎತ್ತಿ ನಡೆಯಲು ಸಾಧ್ಯವಾಗ್ತಿಲ್ಲ. ಘಟನೆಯಿಂದ ತುಂಬಾ ನೋವಾಗಿದೆ, ಎಂದು ರಾಮು ಅವರು ಆತ್ಮಹತ್ಯೆಗೂ ಮುನ್ನ ವಾಯ್ಸ್ ನೋಟ್‌ನಲ್ಲಿ ಹೇಳಿಕೊಂಡಿದ್ದಾರೆ.ಶಾಲೆಯ ಪಿಟಿ ಟೀಚರ್ ತಮ್ಮ ತಪ್ಪು ಮುಚ್ಚಿಹಾಕಲು ಹೀಗೆ ಮಾಡಿದ್ದಕ್ಕೆ, ತನ್ನ ಮೇಲೆ ಸುಳ್ಳು ಆರೋಪ ಬಂದಿದೆ ಎಂದು ಯುವಕ ಹೇಳಿಕೊಂಡಿದ್ದಾನೆ. ಶಾಲೆಗೆ ಕಳಂಕ ಬರುವ ಕಾರಣಕ್ಕೆ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ ಎಂದು ಸಹ ವಾಯ್ಸ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ
ಅಕ್ಟೋಬರ್ 31 ರಂದು ರಾಮು ಅವರು ವಾಯ್ಸ್ ನೋಟ್ ಹಾಕಿ ನಾಪತ್ತೆಯಾಗಿದ್ದರು. ಈ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು.ಇದೀಗ ಯುವಕನ ಶವವು ಬೆಟ್ಟದತುಂಗಾ ನಾಲೆಯೊಂದರಲ್ಲಿ ಪತ್ತೆಯಾಗಿದೆ.ಬೆಟ್ಟದ ತುಂಗಾ ಗ್ರಾಮದ ನಾಲೆಯೊಂದರ ಬಳಿ ಬೈಕ್, ಚಪ್ಪಲಿ, ಮೊಬೈಲ್, ಜರ್ಕಿನ್ ಬಿಟ್ಟು ರಾಮು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ.
ಮೃತ ಯುವಕನ ಕುಟುಂಬ ಮತ್ತು ಸಂಬಂಧಿಕರು ಈ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆ ನಡೆಸುವ ಮೂಲಕ ನಿಜವಾದ ತಪ್ಪಿತಸ್ಥರ ಪತ್ತೆಗಾಗಿ ಒತ್ತಾಯಿಸಿದ್ದಾರೆ. ಯುವಕನ ಆತ್ಮಹತ್ಯೆಗೆ ಕಾರಣವಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಬೆಟ್ಟದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.
