ಮೈಸೂರು, ಅಕ್ಟೋಬರ್ 25: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಎಂದರೆ ಬಂಬೂಸವಾರಿ. ಈ ಬಾರಿಯ ಬಂಬೂಸವಾರಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಕ್ಯಾಪ್ಟನ್ ಪ್ರಶಾಂತ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನ ಹೊತ್ತು ಮೆರೆಸಿದ್ದಾನೆ. ಆದರೆ ‘ಗಜಪಡೆ ಕ್ಯಾಪ್ಟನ್ ಆಯ್ಕೆ ವಿಷಯವನ್ನು ನನ್ನ ಬಳಿ ಮುಚ್ಚಿಡಲಾಗಿತ್ತು’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ‘45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಜಪಡೆ ಕ್ಯಾಪ್ಟನ್ ಆಯ್ಕೆ ವಿಚಾರ ಮುಚ್ಚಿಟ್ಟಿದ್ದಾರೆ. ಕೊನೆ ಕ್ಷಣದವರೆಗೂ ನನಗೆ ಅಂಬಾರಿ ಆನೆ ಬಗ್ಗೆ ಮಾಹಿತಿ ಕೊಡಲಿಲ್ಲ. ನಾನೇ ಖುದ್ದಾಗಿ ಕೇಳಿದರೂ ಡಿಸಿಎಫ್ ಯಾವುದೇ ಮಾಹಿತಿ ಕೊಡಲಿಲ್ಲ. ಒಂದು ವಾರ ಮುಂಚಿತವಾಗಿ ಅಂಬಾರಿ ಆನೆ ವಿಚಾರ ತಿಳಿಸಿ ಎಂದು ನಾನೇ ಕೇಳಿದರೂ ತಿಳಿಸಲಿಲ್ಲ. ಕೊನೆಗೆ DCF ಮೂಲಕ ಜಂಬೂಸವಾರಿ ಆನೆ ಬಗ್ಗೆ ತಿಳಿದುಕೊಳ್ಳಬೇಕಾಯ್ತು. ಇದು ನನಗೆ ತೀವ್ರ ಬೇಸರ ಉಂಟುಮಾಡಿದೆ’ ಎಂದಿದ್ದಾರೆ.
ಮೈಸೂರು ದಸರಾ ಹಿನ್ನೆಲೆ ಅರಮನೆಯಲ್ಲಿ ಕಾರ್ಯಕ್ರಮ ಆಯೋಜನೆ ವಿಚಾರವಾಗಿ ಸರ್ಕಾರಕ್ಕೆ ಪ್ರಮೋದಾದೇವಿ ಒಡೆಯರ್ ಕೆಲ ಸಲಹೆ ನೀಡಿದ್ದಾರೆ. ಮೊದಲ ದಿನದಿಂದ 7ನೇ ದಿನದವರೆಗೆ ಸರ್ಕಾರ ಎಂದಿನಂತೆಯೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬಹುದು. ಆಯುಧ ಪೂಜೆ, ವಿಜಯದಶಮಿ ದಿನದಂದು ಅರಮನೆ ಆವರಣವನ್ನು ಮುಕ್ತವಾಗಿಡಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
