ಮೈಸೂರು: ಸೂಪರ್ ಸ್ಟಾರ್ ರಜನಿಕಾಂತ್ ಇಂದು ಬೆಳಗ್ಗೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಯಾವುದೇ ಮಾಹಿತಿ ನೀಡದೇ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್ ತಾಯಿಯ ದರ್ಶನ ಪಡೆದರು. ಬಳಿಕ ದೇವಾಲಯದ ಒಳಗಿರುವ ವಿನಾಯಕ ಹಾಗೂ ಹನುಮಾನ್ ದೇವರ ದರ್ಶನವನ್ನು ಪಡೆದು ದೇವಾಲಯದಿಂದ ಹೊರ ಬಂದು ಅಭಿಮಾನಿಗಳಿಗೆ ಕೈಬೀಸಿ ಹೊರಟರು. ಈ ದೃಶ್ಯವನ್ನು ಭಕ್ತರು ಮೊಬೈಲ್ನಲ್ಲಿ ಸೆರೆಹಿಡಿದು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಬುಧವಾರ ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ ನಾಡ ಅಧಿದೇವತೆಗೆ ಪೂಜೆ ಸಲ್ಲಿಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಯಾರಿಗೂ ನೀಡಿರಲಿಲ್ಲ. ಚಾಮುಂಡಿಬೆಟ್ಟದ ಸಂಪ್ರದಾಯದಂತೆ ಸೂಪರ್ ಸ್ಟಾರ್ಗೆ ಸಾಂಪ್ರದಾಯಿಕ ಶಾಲು ಹಾಗೂ ಹಾರ ಹಾಕಿ ಗೌರವಿಸಲಾಯಿತು. ಪೂಜೆ ಸಲ್ಲಿಸಿದ ನಂತರ ಎಲ್ಲಾ ಅರ್ಚಕರನ್ನು ಆತ್ಮೀಯವಾಗಿ ಮಾತನಾಡಿಸಿದರು. ಕೆಲವು ಅರ್ಚಕರು ಅವರೊಂದಿಗೆ ಫೋಟೋ ಸಹ ತೆಗೆಸಿಕೊಂಡರು ಎಂದು ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್ ಮಾಹಿತಿ ನೀಡಿದರು.
ರಜನಿಕಾಂತ್ ಚಾಮುಂಡಿಬೆಟ್ಟಕ್ಕೆ ಆಗಮಿಸಿರುವ ಸುದ್ದಿ ತಿಳಿದ ಅವರ ಅಭಿಮಾನಿಗಳು ಅವರನ್ನು ನೋಡಲು ಬೆಟ್ಟಕ್ಕೆ ಆಗಮಿಸಿದ್ದು, ಕೆಲವು ಕಾಲ ಸಣ್ಣ ನೂಕುನುಗ್ಗಲು ಸಹ ಸಂಭವಿಸಿತ್ತು. ರಜನಿಕಾಂತ್ ಅಭಿಮಾನಿಗಳಿಗೆ ಕೈಬೀಸಿ ತೆರಳಿದರು.
